ಇತ್ತೀಚಿನ ಸುದ್ದಿ
ಸಚಿವ ಈಶ್ವರಪ್ಪ ಕೊರಳಿಗೆ ಬಿಗಿಯಾಗುತ್ತಿರುವ ಸಂತೋಷ್ ಆತ್ಮಹತ್ಯೆಯ ಉರುಳು: ಸಂಜೆಯೊಳಗೆ ರಾಜೀನಾಮೆ?
13/04/2022, 11:33
ಮೈಸೂರು (reporterkarnataka.com): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪ್ರವಾಸದಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ .ಈಶ್ವರಪ್ಪ ಅವರು ಕಾರ್ಯಕ್ರಮವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ದೌಡಾಯಿಸಿದ್ದಾರೆ. ಸಚಿವರು ರಾಜ್ಯಪಾಲರನ್ನು ಭೇಟಿಯಾಗಿ ಸಂಜೆಯೊಳಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಇದಕ್ಕೆ ಮುನ್ನ ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ಮಧ್ಯೆ
ಮೊಬೈಲ್ ಕರೆಯೊಂದರ ಹಿನ್ನೆಲೆಯಲ್ಲಿ ತಮ್ಮ ಪ್ರವಾಸ ಮೊಟಕುಗೊಳಿಸಿದ ಈಶ್ವರಪ್ಪ ಅವರು ಮೈಸೂರಿನಿಂದ ಬೆಂಗಳೂರಿನತ್ತ ದೌಡಾಯಿಸಿದ್ದಾರೆ.
ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಬಿಜೆಪಿಯ ವಿಭಾಗೀಯ ಮಟ್ಟದ ಸಭೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈಶ್ವರಪ್ಪ ಸೇರಿದಂತೆ
ಬಿಜೆಪಿಯ ಹಲವು ನಾಯಕರು ಅಲ್ಲಿದ್ದರು.
ಈ ವೇಳೆ ಮೊಬೈಲ್ ಕರೆಯೊಂದು ಸಚಿವರಿಗೆ ಬಂದಿದ್ದು, ಬಳಿಕ ದಿಢೀರನೆ ಕಾರಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದರಿಂದ ಹೈಕಮಾಂಡ್ ಸೂಚನೆಯ ಮೇರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತು ಮಾತು ಬಿಜೆಪಿಯೊಳಗೆ ಹರಿದಾಡುತ್ತಿದೆ.