ಇತ್ತೀಚಿನ ಸುದ್ದಿ
ಬಳ್ಳಾಲ್ ಬಾಗ್ ಸರಣಿ ಅಪಘಾತ ಪ್ರಕರಣ: ಗಾಯಾಳು ಮಹಿಳೆ ಗಂಭೀರ; ಆರೋಪಿ ಚಾಲಕನಿಗೆ ಪೊಲೀಸ್ ಕಸ್ಟಡಿ
11/04/2022, 22:27
ಮಂಗಳೂರು(reporterkarnataka.com): ನಗರದ ಬಲ್ಲಾಳ್‌ಬಾಗ್‌ನಲ್ಲಿ ಶನಿವಾರ ಮಧ್ಯಾಹ್ನ ನಡೆದ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಎಂಡಬ್ಲ್ಯು ಕಾರಿನ ಚಾಲಕ ಶ್ರವಣ್ ಕುಮಾರ್‌ನನ್ನು ಸಂಚಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸ್ ವಿಧಿಸಲಾಗಿದೆ.
ನ್ಯಾಯಾಲಯವು ಆರೋಪಿಗೆ ಏಪ್ರಿಲ್ 12ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಜನ ಮತ್ತು ಸಂಚಾರ ದಟ್ಟಣೆಯಿಂದ ಕೂಡಿದ ಪ್ರಮುಖ ರಸ್ತೆಯಲ್ಲಿ ಅತೀ ವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 308, 279, 337, 338ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಯು ಗಂಭೀರವಾದ ನಿರ್ಲಕ್ಷ್ಯ ತೋರಿಸಿರುವುದರಿಂದ ಕಾನೂನು ತಜ್ಞರ ಸಲಹೆ ಪಡೆದು ಆರೋಪಿ ವಿರುದ್ಧ ಅಪರೂಪವೆಂಬಂತೆ ಕಲಂ 308ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿ ಮದ್ಯ ಅಥವಾ ಡ್ರಗ್ಸ್ ಸೇವನೆ ಮಾಡಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲು ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಶ್ರವಣ್ ಕುಮಾರ್ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರಿನ ದಾಖಲೆಗಳು ಸಮರ್ಪಕವಾಗಿರಲಿಲ್ಲ ಎಂದು ತಿಳಿದು ಬಂದಿದೆ.ದಾಖಲೆಯ ಬಗ್ಗೆ ಕೆಲವು ಗೊಂದಲಗಳಿವೆ.ದಾಖಲೆಗಳು ಆತನ ಹೆಸರಿಗೆ ವರ್ಗಾವಣೆ ಆಗಿರಲಿಲ್ಲ ಎಂಬ ಮಾಹಿತಿ ಇದೆ.
ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಾರು ಢಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕರಂಗಲ್ಪಾಡಿಯ ಪ್ರೀತಿ ಮನೋಜ್(47)ರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.