ಇತ್ತೀಚಿನ ಸುದ್ದಿ
ಕೊಡಗಿನ 11 ಕಾಡಾನೆಗಳ ಸ್ಥಳಾಂತರ; 9ಕ್ಕೆ ರೇಡಿಯೋ ಕಾಲರ್: ಸಚಿವ ಉಮೇಶ್ ಕತ್ತಿ
22/03/2022, 16:54
ಮಡಿಕೇರಿ(reporterkarnataka.com): ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ 11 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದ್ದು, 9 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಅವುಗಳ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆ, ಹುಲಿ ಸೇರಿದಂತೆ ವನ್ಯಜೀವಿಗಳ ಉಪಟಳ ಹೆಚ್ಚುತ್ತಿದ್ದು, ಅವುಗಳ ನಿಯಂತ್ರಣ ಮತ್ತು ಶಾಶ್ವತ ಪರಿಹಾರಕ್ಕೆ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸದನದಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿರುವ ಸಚಿವ ಉಮೇಶ್ ಕತ್ತಿ, ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈವರೆಗೆ 9.51 ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು, 2021-22ನೇ ಸಾಲಿನಲ್ಲಿ 10 ಕಿ.ಮೀ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ತಡೆಯಲು 50 ಕಿ.ಮೀ ಸೋಲಾರ್ ಬೇಲಿ ನಿರ್ಮಿಸಲಾಗಿದ್ದು, ಇನ್ನುಳಿದ 51.37 ಕಿ.ಮೀ. ಸೋಲಾರ್ ಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯಲು ಈವರೆಗೆ 96 ಕಿ.ಮೀ ಆನೆ ತಡೆ ಕಂದಕ ನಿರ್ಮಿಸಲಾಗಿದ್ದು, ಇನ್ನುಳಿದ 45.41 ಕಿ.ಮೀ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಕೊಡಗು ಜಿಲ್ಲೆಯಲ್ಲಿ ಅರಣ್ಯ ಸುತ್ತಮುತ್ತ ಕಾಡಾನೆ, ವನ್ಯಪ್ರಾಣಿ ಹಾವಳಿ ಉಂಟಾದ ಸಂದರ್ಭ ತುರ್ತಾಗಿ ಪರಿಸ್ಥಿತಿ ನಿಭಾಯಿಸಲು 12 ಕ್ಷಿಪ್ರ ಸ್ಪಂದನಾ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ 2014ರಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಒಟ್ಟು 11 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ. 9 ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಿ ಅವುಗಳ ಚಲನದ ಮೇಲೆ ನಿಗಾ ವಹಿಸಲಾಗಿದೆ. ಅರಣ್ಯ ಮತ್ತು ವನ್ಯಜೀವಿ ಸಂಕುಲ ರಕ್ಷಣೆಗಾಗಿ 78 ಕಳ್ಳಬೇಟೆ ತಡೆ ಶಿಬಿರ, ಅರಣ್ಯಕ್ಕೆ ಪೂರಕವಾದ ಹುಲ್ಲು ಬೆಳೆಸುವುದು, ರಕ್ಷಿತಾರಣ್ಯಗಳಲ್ಲಿ ಕೆರೆಗಳ ನಿರ್ಮಾಣ, ಹುಲಿ, ಚಿರತೆ ಅಂತಹ ಪ್ರಾಣಿಗಳು ಕಂಡು ಬಂದ ಸಂದರ್ಭ ಅವುಗಳ ಸೆರೆಗೆ ಅರಣ್ಯ ಸಿಬ್ಬಂದಿ ತಂಡ ಸಹಿತ ಬೋನು ಇಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದರು.