12:25 AM Tuesday27 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಹಾಕಬೇಡಿ; ನೀವು ಆರ್ಹರಾಗಿದ್ದರೆ, ಅದು ನಿಮ್ಮನ್ನೇ ಹುಡುಕಿ ಬರಲಿದೆ!

05/02/2022, 19:49

ಮಂಗಳೂರು(reporterkarnataka.com): ಮುಂದಿನ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಕೊಡಿಯಾಲ್ ಬೈಲ್‍ನ ಶಾರದಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದರು.

ಪ್ರಶಸ್ತಿಗಾಗಿ ನಾವು ಎಂದು ಹುಡುಕಿಕೊಂಡು ಹೋಗಬಾರದು. ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆ ನಡೆಯಲಿದೆ ಎಂದು ಅವರು ಹೇಳಿದರು. 

ನಾಡಿನೆಲ್ಲಡೆ ನೀರಿಗಾಗಿ ಗಲಾಟೆ, ಸಂಘರ್ಷ, ನ್ಯಾಯಾಲಯದ ಮೆಟ್ಟಿಲೇರುವ ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕರ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಜನರನ್ನು ಕಣ್ತೆರೆಸುವಲ್ಲಿ ಈ ಪ್ರಶಸ್ತಿ ಅರ್ಹವಾಗಿಯೇ ಮಹಾಲಿಂಗ ನಾಯ್ಕರನ್ನು ಹುಡುಕಿಕೊಂಡು ಬಂದಿದೆ ಎಂದು ಅವರು ಹೇಳಿದರು. 

ಮಹಾಲಿಂಗ ನಾಯ್ಕರದ್ದು ಮೌನ ಕ್ರಾಂತಿ. ಅವರು ವಾಸವಿದ್ದ ಗುಡ್ಡದಲ್ಲಿ ಬಾವಿ ತೋಡಿ ನೀರು ಸಿಗದಿದ್ದಾಗ ಅವರು ವಿಚಲಿತರಾಗದೆ ನಿರಂತರ ಶ್ರಮದಿಂದ ಅವರು ಕಲಿಯುಗದಲ್ಲಿ ಸುರಂಗವನ್ನು ಕೊರೆದು ಗಂಗೆಯನ್ನು ಭೂಮಿಗೆ ತರಿಸಿದ ಸಾಧನೆ ಎಲ್ಲರಿಗೂ ಸ್ಪೂರ್ತಿಯ ಸೆಲೆಯಂತಿದೆ. ಇಂತಹ ಭಗೀರಥರನ್ನು ಕೇಂದ್ರ ಸರ್ಕಾರ ಗುರುತಿಸಿ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷದ ವಿಷಯ ಎಂದರು.

ಸನ್ಮಾನ ಸ್ವೀಕರಿಸಿ ಮತನಾಡಿದ ಮಹಾಲಿಂಗ ನಾಯ್ಕ ಅವರು ಇಂದು ನೀರಿಗಾಗಿ ಸಮಸ್ಯೆಗಳು ಹೆಚ್ಚಾಗುತ್ತಿರುವಂತೆಯೇ ಮುಂದಿನ ದಿನಗಳಲ್ಲಿ ನೀರು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳಲಿದೆ. ಅದಕ್ಕಾಗಿ ನೀರಿನ ಮಹತ್ವವನ್ನು ಅರಿತು ಸಾರ್ವಜನಿಕರು ಮಿತವಾಗಿ ಉಪಯೋಗಿಸಬೇಕು ಎಂದು ತಿಳಿಸಿದರು.

ಗುಡ್ಡದಲ್ಲಿ ಮೂರು ಬಾವಿ ಅಗದೆ ನೀರು ಸಿಗದೆ ಸುರಂಗ ತೋಡಲು ಮುಂದಾದಾಗ ಇವನ್ಯಾಕೆ ಗುಡ್ಡದಲ್ಲಿ ಇನ್ನೂ ಇದ್ದಾನೆ, ಅಲ್ಲಿ ನೀರು ಸಿಗದು ಎಂದೇ ಹೆಚ್ಚಿನವರು ಹೇಳಿದ್ದರು. ಆದರೆ ಅಂದು ನನಗೆ ಅದು ಅನಿವಾರ್ಯವಾಗಿತ್ತು. ನಾನು ಛಲ ಬಿಡದೆ ಯಾಕೆ ನೀರು ಸಿಗುವುದಿಲ್ಲ ಎಂದು ನನ್ನ ಕಾಯಕ ಮಾಡಿದೆ. ಅದಕ್ಕೆ ಪ್ರತಿ ಫಲ ದೊರಕಿದೆ. ಇಂದು ಬೋಳುಗುಡ್ಡದಲ್ಲಿ ಹಚ್ಚ ಹಸಿರಿನ ಕೃಷಿ ಇದೆ. ಮಳೆ ನೀರನ್ನು ಕೂಡಾ ನನ್ನ ಜಾಗದಿಂದ ಹೊರಹೋಗದಂತೆ ಮಾಡಿ ಅಂತರ್ಜಲವನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ. ಪುರಾಣಿಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಸ್ವಾಗತಿಸಿದರು. ಶಾರದಾ ವಿದ್ಯಾಲಯದ ಉಪ ಪ್ರಾಂಶುಪಾಲ ದಯಾನಂದ ಕಟೀಲು ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು