ಇತ್ತೀಚಿನ ಸುದ್ದಿ
ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಸರ ದಿನಾಚರಣೆ: ಕೊರೊನಾ ವಾರಿಯರ್ಸ್ ಗೆ ಗೌರವಾರ್ಪಣೆ
06/06/2021, 14:43
ಮಂಗಳೂರು( reporterkaranatakanews: ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಪಡೀಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಸರ ದಿನಾಚರಣೆ ಜರುಗಿತು.
‘ಉಸಿರು ಹಸಿರು’ ಎನ್ನುವ ಭಾವದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿನೇಶ್ ಚಾಲನೆ ನೀಡಿದರು. ಅವರು ಮಾತನಾಡಿ ಆಮ್ಲಜನಕ ಕೊರತೆ ಎದುರಿಸುತ್ತಿರುವ ಈ ಸಮಯದಲ್ಲಿ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದರು.
ತೋಟಗಾರಿಕೆ ಇಲಾಖೆಯ ನಿರ್ದೇಶಕ ಪ್ರವೀಣ್ ಮಾತನಾಡಿ, ಕೊರೊನಾ ಸೋಂಕಿತರ ಮನಸ್ಥೈರ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ.
ಪರಿಸರ ಜಾಗೃತಿ ಮೂಡಿಸುವಲ್ಲಿ ಇಂತಹ ದಿನಾಚರಣೆಗಳು ಮಹತ್ವಪೂರ್ಣ ಎಂದರು.
ಕ್ರೀಡಾ ಇಲಾಖೆಯ ನಿರ್ದೇಶಕರಾದ ಪ್ರದೀಪ್ ಡಿಸೋಜ ಮಾತನಾಡಿ, ಪರಿಸರ ಸ್ವಚ್ಛತೆ ಸಾಮಾಜಿಕ ಜವಾಬ್ದಾರಿ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ ಹಾಗೂ ರೂಪಶ್ರೀ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾದ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ. ಎ. ಮಾತನಾಡಿ, ಕೊರೊನಾ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಎಲ್ಲಾ ಸಿಬ್ಬಂದಿಗಳ ಜೊತೆಗೂಡಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದು ಒಂದು ಮಹತ್ವದ ಕಾರ್ಯಕ್ರಮ ಹಾಗೂ ಜೀವನಕ್ಕೆ ಜೀವ ತುಂಬುವ ಈ ಕೆಲಸ ಪ್ರಾಣವಾಯು ಇದ್ದಂತೆ ಎಂದರು.
ದ.ಕ ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಡಾ. ಸೇಸಪ್ಪ ಅಮೀನ್ ನಿರೂಪಿಸಿದರು.
ಕಾರ್ಮೆಲ್ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಮಧುರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಪುಷ್ಪ ನೀಡಿ ಗೌರವಿಸಲಾಯಿತು.