ಇತ್ತೀಚಿನ ಸುದ್ದಿ
‘ಪರಾಕ್ರಮ ದಿವಸ್’: ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಒಂದು ನೆನಪು
23/01/2022, 14:21
“ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವ ಸರಕಲ್ಲ, ಅದು ನಾವೇ ಪಡೆದುಕೊಳ್ಳಬೇಕಾದದ್ದು ” ಎಂಬ ವೀರ ಘರ್ಜನೆಯೊಂದಿಗೆ ಭಾರತೀಯರನೆಲ್ಲ ಹುರಿದುಂಬಿಸಿ ಎಲ್ಲರ ಅಚ್ಚುಮೆಚ್ಚಿನ “ನೇತಾಜಿ” ಯಾಗಿಪ್ರಸಿದ್ಧಿ ಪಡೆದ ಸ್ವಾತಂತ್ರ್ಯ ಹೋರಾಟಗಾರರೇ “ಸುಭಾಷ್ ಚಂದ್ರ ಬೋಸ್”
ಸುಭಾಷ್ ಚಂದ್ರ ಬೋಸ್ ರವರು ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದಂಪತಿಯ ಪುತ್ರನಾಗಿ 1897 ಜನವರಿ 23 ರಂದು ಒರಿಸ್ಸಾದ ಕಟಕ್ ನಲ್ಲಿ ಜನಿಸಿದರು. ಇವರು ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರವಿಂದರವರ ಆಧ್ಯಾತ್ಮ ತತ್ವಜ್ಞಾನಗಳಿಂದ ಬಹಳಷ್ಟು ಪ್ರಭಾವವನ್ನು ಹೊಂದಿದ್ದರು. ತಮ್ಮ ಬಿಎ ಪದವಿಯ ನಂತರ ಇಂಗ್ಲೆಂಡಿನಲ್ಲಿ ಐಸಿಎಸ್ ಪದವಿಯನ್ನು ನಾಲ್ಕನೇ ರಾಂಕ್ ನೊಂದಿಗೆ ಉತ್ತೀರ್ಣರಾಗಿ,ವಿದೇಶಿ ನೌಕರಿಯನ್ನು ತಿರಸ್ಕರಿಸಿ ಭಾರತಕ್ಕೆ ಮರಳಿ ಬಂದರು.
ಅದಾಗಲೇ ಭಾರತದಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಸಾಗುತ್ತಿತ್ತು, ಇಂಗ್ಲೆಂಡಿನಿಂದ ಮರಳಿದ ಸುಭಾಶ್ಚಂದ್ರರು ಗಾಂಧೀಜಿ ಅವರನ್ನು ಭೇಟಿ ಮಾಡಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಹೋರಾಟದ ರೂಪುರೇಷೆಗಳನ್ನು ಹಂಚಿಕೊಂಡರು.ಸ್ವಾತಂತ್ರ್ಯ ಪಡೆಯಲು ದುರ್ಬಲ ನೀತಿಯನ್ನು ಹೊಂದಿರಬಾರದು ಎಂಬ ದಿಟ್ಟ ನಿಲುವನ್ನು ಹೊಂದಿದ್ದವರು ಸುಭಾಷರು.
ಗಾಂಧೀಜಿಯವರು ಸತ್ಯ, ಶಾಂತಿ ಅಹಿಂಸೆ ,ತ್ಯಾಗ ಇವುಗಳ ಮೂಲಕ ಸ್ವಾತಂತ್ರ್ಯ ಪಡೆಯುವುದರ ಬಗ್ಗೆ ಚಿಂತಿಸುತ್ತಿದ್ದರು. ಗಾಂಧೀಜಿಯವರ ಅಭಿಪ್ರಾಯಗಳು ಸುಭಾಷರಿಗೆ ಸರಿ ಅನಿಸುತ್ತಿರಲಿಲ್ಲ. ಸಶಸ್ತ್ರ ಹೋರಾಟದಿಂದ ಮಾತ್ರವೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಪ್ರಮುಖ ಅಸ್ತ್ರ ಎಂದು ತಿಳಿದಿದ್ದರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಕ್ರಾಂತಿಕಾರಕ ಮನೋಭಾವನೆಯನ್ನು ಸುಭಾಷರು ಹೊಂದಿದ್ದರು.
ಸುಭಾಷ್ ಚಂದ್ರಬೋಸರು ಕಾನೂನು ಅಸಹಕಾರ ಚಳುವಳಿಯ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರು ಮಂಡಿಸುತ್ತಿದ್ದ ವಾದಗಳು ಸಿದ್ಧತೆಗಳು, ನಿಲುವುಗಳು ಇತರರಿಗೆ ಇಷ್ಟವಾಗುತ್ತಿರಲಿಲ್ಲ. ದೂರದರ್ಶಿತ್ವ ಇಲ್ಲದ ನಿಲುವು ಸುಭಾಷರದ್ದು ಎಂಬುದು ಉಳಿದವರ ವಾದವಾಗಿತ್ತು. ಆದರೆ ಸುಭಾಷರಿಗೆ ಇದ್ದ ರಾಜಕೀಯ ಚಿಂತನೆ ವಿಶಾಲ ಮನೋಭಾವನೆ ಆ ಕಾಲದಲ್ಲಿ ಯಾರಲ್ಲೂ ಇರಲಿಲ್ಲ. 1939ರಲ್ಲಿ ಸುಭಾಷ್ಚಂದ್ರಬೋಸರು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದರು. ಅಲ್ಪ ಅವಧಿಯಲ್ಲಿಯೇ ಆ ಹುದ್ದೆಗೆ ರಾಜೀನಾಮೆಯನ್ನು ನೀಡಿದರು.
ನೇತಾಜಿಯವರು ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ರಾಷ್ಟ್ರಗಳಲ್ಲಿ ಸಂಚಾರ ಮಾಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಆ ದೇಶಗಳ ಸಹಾಯವನ್ನು ಪಡೆಯಲು ಚರ್ಚಿಸುತ್ತಿದ್ದರು.
ಸುಭಾಷ್ ಚಂದ್ರ ಬೋಸರು ಬ್ರಿಟಿಷ್ ಸರ್ಕಾರದ ಧೋರಣೆಗಳನ್ನು ವಿರೋಧಿಸುತ್ತಿದ್ದರು.
ಸುಭಾಷ್ ಚಂದ್ರ ಬೋಸರ ಸ್ವಾತಂತ್ರ್ಯ ಹೋರಾಟದ ಗತಿಯನ್ನು ಗಮನಿಸಿದ ಬ್ರಿಟಿಷ್ ಸರ್ಕಾರವು ಸುಭಾಷರನ್ನು ಗೃಹಬಂಧನದಲ್ಲಿರಿಸಿತು.
1941ರಲ್ಲಿ ರಹಸ್ಯವಾಗಿ ದೇಶವನ್ನು ತೊರೆದು ಯುರೋಪ್ ದೇಶಕ್ಕೆ ಹೋದರು. ಬ್ರಿಟಿಷರ ವಿರುದ್ಧ ರಷ್ಯನ್ ಮತ್ತು ಜರ್ಮನಿಯ ಸಹಾಯವನ್ನು ಕೇಳಿದರು.
1942ರಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿ (I N A ) ಯನ್ನು ಸ್ಥಾಪಿಸಿದರು.” ಜೈಹಿಂದ್” ಎಂಬ ಘೋಷಣೆಯನ್ನು ಕೂಗಿ ಎಲ್ಲ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಹುರಿದುಂಬಿಸಿದರು. ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡು ರೇಡಿಯೋ ಮೂಲಕ ಭಾಷಣವನ್ನು ಮಾಡುತ್ತಾ ಯುವಕರಿಗೆ ಪ್ರೇರಣೆಯನ್ನು ನೀಡುತ್ತಿದ್ದರು.
ಯುವಶಕ್ತಿ ಮತ್ತು ಸೈನ್ಯದ ಬಗ್ಗೆ ಅತೀವ ನಂಬಿಕೆಯನ್ನು ಹೊಂದಿದ್ದ ಇವರು 1945 ಆಗಸ್ಟ್ 18 ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್ ನಿಂದ ವಿಮಾನ ಹತ್ತಿದ ಸ್ವಲ್ಪ ಸಮಯದಲ್ಲಿ ವಿಮಾನ ಸ್ಫೋಟದಿಂದ ನಿಧನರಾದರು ಎಂಬ ರೇಡಿಯೋ ಸುದ್ದಿ ಬರಸಿಡಿಲಿನಂತೆ ಭಾರತೀಯರ ಕಿವಿಗೆ ಅಪ್ಪಳಿಸಿತು. ಆದರೆ ಇವರ ಸಾವು ಇಂದಿಗೂ ನಿಗೂಢ ರಹಸ್ಯವಾಗಿಯೇ ಉಳಿದಿರುವುದು ಚರ್ಚಿತ ವಿಷಯವಾಗಿದೆ.
ಸ್ವಾತಂತ್ರ್ಯದ ಬಗ್ಗೆ ಬಹಳಷ್ಟು ಕನಸನ್ನು ಕಂಡಂತಹ ವೀರಸೇನಾನಿ ನೇತಾಜಿಯವರು ಭಾರತ ಸ್ವಾತಂತ್ರ್ಯ ಪಡೆಯುವ ಮೊದಲೇ ಅಸ್ತಂಗತ ರಾದರು.ಧೈರ್ಯ, ಅಚಲ ನಂಬಿಕೆ, ಸ್ವಾಭಿಮಾನ ,ದೇಶಪ್ರೇಮ ಹೊಂದಿದ ಧೀಮಂತ ನಾಯಕ ಸುಭಾಷರು. ದೇಶ ಕಟ್ಟಲು ಸೈನ್ಯಬಲದ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಎಲ್ಲರಿಗಿಂತಲು ವಿಭಿನ್ನ. ವಿಶಿಷ್ಟ ವ್ಯಕ್ತಿತ್ವದ ಸುಭಾಷ್ ಚಂದ್ರ ಬೋಸರ ವ್ಯಕ್ತಿತ್ವ ,ಪರಾಕ್ರಮ ಇಂದಿನ ಮಕ್ಕಳ ಜೀವನದಲ್ಲಿ ಆದರ್ಶವಾಗಬೇಕು. ಅವರ ಜನ್ಮದಿನವನ್ನು “ಪರಾಕ್ರಮ ದಿವಸ್” ಎಂಬುದಾಗಿ ಆಚರಿಸುವ ಮೂಲಕ ನಾವೆಲ್ಲರೂ ನಮ್ಮ ನಮನವನ್ನು ಸಲ್ಲಿಸೋಣ. ಅವರ ಬದುಕು ಈಗಿನ ನಮ್ಮ ಮಕ್ಕಳಿಗೆ ಆದರ್ಶವಾಗಲಿ.
“ಜೈ ಹಿಂದ್”
✍️