ಇತ್ತೀಚಿನ ಸುದ್ದಿ
ಅಂದು ಸಾಲ ಕೊಟ್ಟು ಸತ್ಕರಿಸಿದರು; ಇಂದು ಪೊಲೀಸರ ಮೂಲಕ ಬೀದಿ ವ್ಯಾಪಾರಿಗಳ ಅಟ್ಟಾಡಿಸಿ ಓಡಿಸಿದರು!: ಮೇಯರ್ ಸಾಹೇಬ್ರೇ, ಇದು ಯಾವ ನ್ಯಾಯ?
29/12/2021, 08:46
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಮಂಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಲೆಲ್ಲ ಬೀದಿ ಬದಿ ವ್ಯಾಪಾರಸ್ಥರ ಬದುಕು ಅನಿಶ್ಚಿತತೆಗೆ ಸಿಲುಕುವುದು ಮತ್ತೆ ಸಾಬೀತಾಗಿದೆ. ಈ ಹಿಂದೆಯೂ ಪಾಲಿಕೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಆಡಳಿತಕ್ಕೆ ಬಂದಾಗಲೂ ಬೀದಿ ವ್ಯಾಪಾರಸ್ಥರ ವಿರುದ್ಧ ಕತ್ತಿ ಮಸೆಯಲಾಗಿತ್ತು. ಟೈಗರ್ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮತ್ತೆ ಬೀದಿ ಬದಿ ವ್ಯಾಪಾರಸ್ಥರ ವಿರುದ್ಧ ಗಧೆ ಬೀಸಲು ಬಿಜೆಪಿ ಆಡಳಿತ ಶುರು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಯೋಜನೆಯಡಿ ಮಂಗಳೂರು ಮಹಾನಗರಪಾಲಿಕೆ ಇತ್ತೀಚೆಗಷ್ಟೇ ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲ ಯೋಜನೆ ಜಾರಿಗೊಳಿಸಿತ್ತು. ಟಾರ್ಗೆಟ್ ರೀಚ್ ಆಗಲು ಬೀದಿ ವ್ಯಾಪಾರಿಗಳು ಅಲ್ಲದವರಿಗೂ ಸಾಲ ನೀಡಿತ್ತು. ಮಂಗಳೂರು ಪುರಭವನದಲ್ಲಿ ರೆಡ್ ಕಾರ್ಪೆಟ್ ಹಾಸಿ ಬೀದಿ ವ್ಯಾಪಾರಿಗಳನ್ನು ಹಾಗೂ ಬ್ಯಾಂಕರ್ ಗಳನ್ನು ಒಂದೇ ಸೂರಿನಡಿಗೆ ಕರೆಸಿ ದೊಡ್ಡ ಜಾತ್ರೆಯೇ ನಡೆಸಲಾಗಿತ್ತು. ಮಂತ್ರಿಗಳು, ಶಾಸಕರು, ಮೇಯರ್ ಎಲ್ಲರೂ ಬೀದಿ ವ್ಯಾಪಾರಿಗಳ ರಕ್ಷಕರ ತರಹ ಫೋಸ್ ಕೊಟ್ಟಿದ್ದರು. ಆದರೆ ಪಾಲಿಕೆ ಆಡಳಿತ ಈಗ ಅದನ್ನೆಲ್ಲ ಒಂದು ವರ್ಷದೊಳಗೆ ಬಿಟ್ಟಿದೆ.
ಇದೀಗ ಮತ್ತೆ ತನ್ನ ಹಳೆ ದಾಳಿಯನ್ನು ಮುಂದುವರಿಸಿದೆ.
ಬೀದಿ ವ್ಯಾಪಾರಿಗಳ ವಿರುದ್ಧ ಸಮರ ಸಾರಿದೆ.
ಇಷ್ಟೇ ಅಲ್ಲದೆ ಪಾಲಿಕೆ ಆಡಳಿತವೇ ಬೀದಿ ವ್ಯಾಪಾರಿಗಳಿಗೆ ಗುರುತು ಚೀಟಿ ನೀಡಿತ್ತು. ಇದೀಗ ಅದೇ ಗುರುತು ಚೀಟಿಯನ್ನು ಬಡ ಬೀದಿ ವ್ಯಾಪಾರಿಗಳು ದಾಳಿ ವೇಳೆ ತೋರಿಸಿದರೆ ಪಾಲಿಕೆ ಅಧಿಕಾರಿಗಳು ಗಹಗಹಿಸಿ ನಗುತ್ತಾರೆ, ಫ್ರೇಮ್ ಹಾಕಿ ಇಟ್ಟುಕೊಳ್ಳಿ ಎಂದು ಉಡಾಫೆಯ ಉತ್ತರ ಕೊಡುತ್ತಿದ್ದಾರೆ.
ಈ ಹಿಂದೆ ವಿಜಯ ಪ್ರಕಾಶ್ ಅವರು ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಆಗಿದ್ದಾಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿತ್ತು. ಆಗ ವಿಜಯ ಪ್ರಕಾಶ್ ಅವರು ಅಧಿಕಾರಸ್ಥರ ಆಣತಿಯಂತೆ ಬೀದಿ ವ್ಯಾಪಾರಿಗಳನ್ನು ಮಟ್ಟ ಹಾಕಲು ಟೈಗರ್ ಕಾರ್ಯಾಚರಣೆ ಆರಂಭಿಸಿ ಬಡ ವ್ಯಾಪಾರಿಗಳ ಹೊಟ್ಟೆಗೆ ಕಲ್ಲು ಚಪ್ಪಡಿ ಎಳೆಯುವ ಕೆಲಸ ಮಾಡಿದ್ದರು. ಪಾಲಿಕೆಯ ಕಸ ಎತ್ತುವ ಹಳೆಯ ಲಾರಿಗೆ ಹುಲಿ ಬಣ್ಣದ ಪೈಂಟ್ ಕೊಡಿಸಿ ಟೈಗರ್ ಕಾರ್ಯಾಚರಣೆ ನಡೆಸಿದ್ದರು. ಪಾಲಿಕೆ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳಲ್ಲಿ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತಿದ್ದ ಈ ಲಾರಿಯಲ್ಲಿ ಬೀದಿ ವ್ಯಾಪಾರಿಗಳ ಸಾಮಗ್ರಿಗಳನ್ನು ತುಂಬಿಸಿಕೊಂಡೋಗಿ ಪಾಲಿಕೆ ಕಚೇರಿಯ ಹಿಂದುಗಡೆ ರಾಶಿ ಹಾಕಲಾಗುತ್ತಿತ್ತು. ಬಡ ವ್ಯಾಪಾರಿಗಳ ತರಕಾರಿ, ಹಣ್ಣು- ಹಂಪಲನ್ನು ಮನೆಗೆ ಕೊಂಡೋಗಿ ಅಡುಗೆ ಮಾಡಿ ತಿಂದು ತೇಗಿದ ಪಾಲಿಕೆಯ ಕೆಲವು ಸಿಬ್ಬಂದಿಗಳು ಕೂಡ ಇದ್ದಾರೆ. ಇಂತಹದ್ದೇ ಪರಿಸ್ಥಿತಿ ಮತ್ತೆ ಬಿಜೆಪಿ ಆಡಳಿತದಲ್ಲಿ ತಲೆದೋರಿದೆ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮಂಗಳೂರು ನಗರವನ್ನು ಸುಂದರ ಮಾಡಲು ಹೊರಟ ಇಲ್ಲಿನ ಜನಪ್ರತಿನಿಧಿಗಳು ಕಮಿಷನ್ ದಂಧೆ ನಡೆಸುವುದರ ಜತೆಗೆ ಬಡಪಾಯಿಗಳ ಹೊಟ್ಟೆ ಮೇಲೆ ಹೊಡೆಯಲು ಕೂಡ ಶುರು ಮಾಡಿದ್ದಾರೆ. ವಾಸ್ತವದಲ್ಲಿ ಸ್ಮಾರ್ಟ್ ಸಿಟಿ ಕಾನ್ಸೆಪ್ಟ್ ನ ಅರ್ಥ ಇನ್ನೂ ಅವರಿಗೆ ಆದ ಹಾಗೆ ಕಾಣಿಸುತ್ತಿಲ್ಲ. ಸ್ಮಾರ್ಟ್ ಸಿಟಿ ಅಂದ್ರೆ ಕೇವಲ ರಸ್ತೆಗೆ ಕಾಂಕ್ರೀಟ್ ಹಾಕುವುದು, ಫುಟ್ ಪಾತ್ ಗೆ ಬಣ್ಣದ ಹಾಸು ತೊಡಿಸುವುದು, ಹಳೆ ಕಟ್ಟಡ ರಿಪೇರಿ ಮಾಡುವುದು, ಪಾರ್ಕ್ ನಿರ್ಮಿಸುವುದು, ಸ್ಮಾರ್ಟ್ ರಸ್ತೆ ಮಾಡುವುದು ಅಷ್ಟೇ ಅಂತ ತಿಳಿದುಕೊಂಡಿದ್ದಾರೆ(ಯಾಕೆಂದರೆ ಇದರಲ್ಲಿಯೇ ಕಮಿಷನ್ ದಂಧೆ ನಡೆಯುವುದು).
ಆದರೆ ನಿಜವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಆ ಪ್ರದೇಶದ ಜನರಿಗೆ ಸುಸ್ಥಿರ ಆದಾಯ ಒದಗಿಸುವುದು ಕೂಡ ಬಹಳ ಮುಖ್ಯವಾಗಿದೆ. ಇಲ್ಲಿ ಮಾತ್ರ ಎಲ್ಲವೂ ತಲೆ ಕೆಳಗಾಗಿದೆ. ಜನರಿಗೆ ಸುಸ್ಥಿರ ಆದಾಯಕ್ಕೆ ದಾರಿ ಮಾಡಿಕೊಡುವ ಬದಲು ಇದ್ದ ಆದಾಯಕ್ಕೆ ಕಲ್ಲು ಚಪ್ಪಡಿ ಎಳೆಯಲು ಪಾಲಿಕೆ ಆಡಳಿತ ಸಿದ್ಧವಾಗಿದೆ.
ಮಂಗಳೂರು ಮಹಾನಗರಪಾಲಿಕೆ ಆಡಳಿತ ಕಾರ್ಯ ವೈಖರಿ ವಿರುದ್ಧ ಬೀದಿ ಬದಿಯಲ್ಲಿ ಹಂಚಿ ಹೋಗಿದ್ದ ಬಡ ವ್ಯಾಪಾರಿಗಳು ಪಾಲಿಕೆ ಕಚೇರಿ ಎದುರು ಒಗ್ಗೂಡಿದ್ದಾರೆ. ಈಗಾಗಲೇ ಪ್ರತಿಭಟನೆ ಶುರುವಾಗಿದೆ. ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿಗೆ ಮುಂದಾಗಿದ್ದಾರೆ. ಶ್ರೀಮಂತರಿಗೆ ರೆಡ್ ಕಾರ್ಪೆಟ್ ಹಾಸುವ ಪಾಲಿಕೆ ಆಡಳಿತ ಬಡವರ ಬಗ್ಗೆಯೂ ಕಾಳಜಿ ವಹಿಸುವ ಅಗತ್ಯವಿದೆ.