ಇತ್ತೀಚಿನ ಸುದ್ದಿ
ಮತಾಂತರ ನಿಷೇಧ ಕಾಯ್ದೆಗೆ ಸಚಿವ ಸಂಪುಟ ಅನುಮೋದನೆ: ಇಂದು ಅಧಿವೇಶನದಲ್ಲಿ ಮಂಡನೆ ಬಹುತೇಕ ಖಚಿತ
21/12/2021, 11:10
ಬೆಳಗಾವಿ(reporterkarnataka.com) :
ಮತಾಂತರ ನಿಷೇಧ ಮಸೂದೆಗೆ ಕರ್ನಾಟಕ ಸರಕಾರದ ಕ್ಯಾಬಿನೆಟ್ ಸೋಮವಾರ ಅನುಮೋದನೆ ನೀಡಿದ್ದು, ಡಿಸೆಂಬರ್ 21ರಂದು ವಿಧಾನಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಗಳವಾರ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಮತಾಂತರ ನಿಷೇಧ ಕಾಯ್ದೆ ಹಾಗೂ ಲವ್ ಜಿಹಾದ್ ಕಾಯ್ದೆಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಪ್ರಮುಖ ನಿರ್ಧಾರವನ್ನೂ ಮಡಲಾಗಿದೆ.
ಬಿಜೆಪಿ ಸರ್ಕಾರಕ್ಕೆ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ. ಆದರೆ ವಿಧಾನ ಪರಿಷತ್ತಿನಲ್ಲಿ ಈ ಮಸೂದೆ ಪಾಸ್ ಆಗಲು ಜೆಡಿಎಸ್ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ. ಎರಡು ಸದನಗಳಲ್ಲಿಯೂ ಮತಾಂತರ ನಿಷೇಧ ಕಾಯ್ದೆಯನ್ನು ಈ ಬೆಳಗಾವಿ ಅಧಿವೇಶನದಲ್ಲಿಯೇ ಅನುಮೋದನೆ ಪಡೆಯಲು ಬಿಜೆಪಿ ಸರ್ಕಾರದ ಚಿಂತನೆನಡೆಸಿದ್ದು, ಒಂದಿಷ್ಟು ಮಾರ್ಪಾಡುಗಳೊಂದಿಗೆ ಯಥಾವತ್ತಾಗಿ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುಳಿವು ನೀಡಿದ್ದಾರೆ.
.ವಿರೋಧ ಪಕ್ಷಗಳು ಮತ್ತು ಕ್ರೈಸ್ತ ಸಮುದಾಯದ ಮುಖಂಡರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಪ್ರಸ್ತಾವಿತ ಮಸೂದೆಯು ದಂಡದ ನಿಬಂಧನೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವ ವ್ಯಕ್ತಿಗಳು ಎರಡು ತಿಂಗಳ ಮೊದಲು ಡೆಪ್ಯೂಟಿ ಕಮಿಷನರ್ ಮುಂದೆ ಅರ್ಜಿಯನ್ನು ಸಲ್ಲಿಸಬೇಕೆಂದು ಷರತ್ತು ವಿಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಂಗಳವಾರ ವಿಧೇಯಕ ಮಂಡಿಸುತ್ತೇವೆ ಎಂದು ತಿಳಿಸಿದ್ದಾರೆ. ಆರ್ ಅಶೋಕ್ ಸೇರಿದಂತೆ ಹಲವು ಸಚಿವರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.