ಇತ್ತೀಚಿನ ಸುದ್ದಿ
ಕರಾವಳಿಯಲ್ಲಿ ಶಾಂತಿ ಕಾಪಾಡಲು ಸರ್ವ ಧರ್ಮೀಯರ ಸಹಕಾರ ಅಗತ್ಯ: ವಿಧಾನ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ
15/12/2021, 23:33
ಬೆಳಗಾವಿ(reporterkarnataka.com):
ಕರಾವಳಿಯಲ್ಲಿ ಶಾಂತಿಯನ್ನು ಕಾಪಾಡಲು ಎಲ್ಲ ಧರ್ಮೀಯರು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದರು.
ಬುಧವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್, ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು ಉತ್ತರಿಸಿದರು.
ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ, ಅದರಲ್ಲೂ ಕೋಮುಸೌಹಾರ್ದತೆ ಕಾಪಾಡುವುದು ನಮ್ಮ ಪಾಲಿಗೆ ಮುಖ್ಯ. ಯು.ಟಿ.ಖಾದರ್ ಅವರಿಗೆ ಯಾವುದೇ ಆತಂಕ ಬೇಡ. ಯಾವುದಾದರೂ ನಿರ್ದಿಷ್ಟ ಪ್ರಕರಣ ಇದ್ದರೆ ನನ್ನ ಅಥವಾ ಮುಖ್ಯಮಂತ್ರಿಯ ಗಮನಕ್ಕೆ ತಂದರೆ ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕರಾವಳಿ ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳು ಆದಾಗ ಪೊಲೀಸರು ಗಂಭೀರ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಯಾವುದೆ ಜಾತಿ, ಧರ್ಮದ ಪ್ರಶ್ನೆಯಿಲ್ಲ. ಶಾಂತಿ ಸುವ್ಯವಸ್ಥೆಗೆ ಭಂಗ ಬರಬಾರದು ಎಂಬುದು ಸರಕಾರದ ಉದ್ದೇಶ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಪೊಲೀಸರ ಮೇಲೆಯೆ ಹಲ್ಲೆಯಾಗಿದೆ. 300-400 ಜನ ಸೇರಿ ಪೊಲೀಸರ ಮೇಲೆ ಹಲ್ಲೆ ಮಾಡಿ, ಚೂರಿ ಹಾಕಿದ್ದಾರೆ. ಅಂತಹ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳಲೇಬೇಕು. ಈ ಘಟನೆ ಕುರಿತು ವರದಿ ತರಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾದ್ದನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಂಭ್ರಮಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಕಿಡಿಗಾರಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕರು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ಕೊಡಬೇಡಿ ಎಂದರು. ಆಗ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿ, ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು. ಅಂತಹವರನ್ನು ವಿಧಾನಸಭೆಯಲ್ಲಿ ಬೆಂಬಲಿಸುವವರನ್ನು ಒಳಕ್ಕೆ ಹಾಕಬೇಕು ಎಂದರು.
ನಂತರ ಮಾತು ಮುಂದುವರೆಸಿದ ಆರಗ ಜ್ಞಾನೇಂದ್ರ, ನಾನು ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಇಡೀ ದೇಶ ಕಣ್ಣೀರು ಹಾಕಿದ ಘಟನೆಯನ್ನು ಸಂಭ್ರಮಿಸಿದ ಕುರಿತು ಎರಡು, ಮೂರು ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ, ಮಂಗಳೂರಿನಲ್ಲಿ ಬಸ್ಸಿನಲ್ಲಿ ಒಟ್ಟಿಗೆ ಹೋಗುತ್ತಿದ್ದ ಹುಡುಗ, ಹುಡುಗಿ ಮೇಲೆ ನಡೆದ ಹಲ್ಲೆ ಕುರಿತು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ. ನಮ್ಮ ಸರಕಾರ ಪೊಲೀಸರ ಮೇಲೆ ಯಾವುದೆ ಒತ್ತಡ ಹಾಕುತ್ತಿಲ್ಲ. ನಮಗೆ ಶಾಂತಿ, ಸೌಹಾರ್ದತೆ, ಕೋಮುಸೌಹಾರ್ದತೆ ಕಾಪಾಡುವುದು ಮುಖ್ಯ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿ ಮಾತನಾಡಿದ ಯು.ಟಿ.ಖಾದರ್, ಕರಾವಳಿ ಜಿಲ್ಲೆಗಳಲ್ಲಿ ಅನೈತಿಕ ಗೂಂಡಾಗಿರಿ, ದ್ವೇಷದ ಮಾತುಗಳನ್ನು ಆಡಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವವರನ್ನು ಬಂಧಿಸಿ, ಮರು ದಿವಸ ಬಿಡುಗಡೆ ಮಾಡಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತಲವಾರುಗಳನ್ನು ಇಟ್ಟುಕೊಳ್ಳಿ ಎಂದು ಕರೆ ನೀಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಪ್ರಶ್ನಿಸಿದರೆ, ಆಕ್ಷನ್‍ಗೆ ರಿಯಾಕ್ಷನ್ ಎನ್ನುತ್ತಾರೆ. ತ್ರಿಶೂಲ ದೀಕ್ಷೆ ನೀಡಲಾಗುತ್ತಿದೆ. ಆನಂತರ ಹಲ್ಲೆ ಪ್ರಕರಣಗಳು ವರದಿಯಾಗಿವೆ. ತ್ರಿಶೂಲ ದೀಕ್ಷೆ ನೀಡಿದ್ದು ಯಾಕೆ ಎಂಬುದರ ಬಗ್ಗೆ ಸರಕಾರ ವರದಿ ತರಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಮಾಜದಲ್ಲಿನ ಶಾಂತಿ, ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸುವವರು ಯಾರೇ ಆಗಿದ್ದರೂ ಅವರ ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಲಿ. ಆದರೆ, ಅಮಾಯಕರಿಗೆ ತೊಂದರೆಯಾಗಬಾರದು ಎಂದು ಖಾದರ್ ಹೇಳಿದರು.