ಇತ್ತೀಚಿನ ಸುದ್ದಿ
ಚಳ್ಳಕೆರೆ ತಾಲೂಕಿನಲ್ಲಿ ಅಕ್ರಮ ಮದ್ಯದ ಹೊಳೆ: ಇಲ್ಲಿನ ಅಂಗಡಿ, ಹೋಟೆಲ್ ಗಳು ಕೂಡ ಮಿನಿ ಬಾರ್ !
02/12/2021, 08:34
ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಳ್ಳಕೆರೆ ತಾಲೂಕಿನ ಬಹುತೇಕ ಚಿಲ್ಲರೆ ಅಂಗಡಿಗಳು , ಹೋಟೆಲ್‍ಗಳು ಮಿನಿ ಬಾರ್‍ಗಳಾಗಿದ್ದು, ಅನಧಿಕೃತ ಮದ್ಯಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಜಾಣ ಕುರುಡರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪರವಾನಿಗಿ ಪಡೆದ ಮದ್ಯದಂಗಡಿ ಇದ್ದರೂ ಸಹ ಗ್ರಾಮದಲ್ಲಿ ಸುಮಾರು 20 ಕ್ಕೂ ಹೆಚ್ಚು ಅಂಗಡಿ ,ಹೋಟೆಲ್ ಹಾಗೂ ಜನವಸತಿ ಪ್ರದೇಶದ ಮನೆಗಳಲ್ಲೂ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದರಿಂದ ಯುವಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಅಪ್ರಾಪ್ತ ವಯಸ್ಕರು ಮದ್ಯದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರು ಕೂಲಿ ಕೆಲಸಕ್ಕೆ ಹೋಗಿ ತಂದ ಹಣವನ್ನು ಕುಡಿಯಲು ಕೊಡದಿದ್ದರೆ ಗಲಾಟೆ ಮಾಡುವುದು, ಹೊಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಇನ್ನು ಆಂಧ್ರ ಗಡಿ ಗ್ರಾಮಗಳಲ್ಲಿ ಮದ್ಯ ಖರೀದಿಸಲು ಹಣ ಕೊಡದ ಹೆಂಡತಿಯರನ್ನು ಹೊಡೆದು ಕೊಲೆ ಮಾಡಿದ ಪ್ರಕರಣಗಳು ಸಹ ಇವೆ. ಹೀಗೆ ದುಡಿದ ಹಣವೆಲ್ಲವೂ ಮದ್ಯಕ್ಕೆ ಖರ್ಚಾಗುತ್ತಿರುವುದರಿಂದ ಹೆಂಗಸರು ಮಕ್ಕಳು ಬೀದಿಗೆ ಬೀಳುವಂತಾಗಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ಅಥವಾ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳ ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಅನಧಿಕೃತ ಮದ್ಯದ ಅಂಗಡಿಗಳಿಂದ ಗ್ರಾಮೀಣ ಭಾಗದ ಕೂಲಿಕಾರರ, ರೈತರ ಕುಟುಂಬಗಳ ಬದುಕು ಹೈರಾಣಾಗುತ್ತಿದೆ.
ಈ ಅಂಗಡಿಗಳು ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲು ಪೈಪೋಟಿಗೆ ಬಿದ್ದು ಹೋಟೆಲ್, ಪೆಟ್ಟಿಗೆ ಅಂಗಡಿ, ದಿನಸಿ ಇನ್ನಿತರ ಪದಾರ್ಥಗಳನ್ನು ಮಾರಾಟ ಮಾಡುವ ನೆಪದಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲು ಮುಂದಾಗಿದ್ದಾರೆ. ಅಧಿಕೃತ ಪರವಾನಗಿ ಪಡೆದ ಬಾರ್ ಮತ್ತು ರೆಸ್ಟೋರೆಂಟ್ ಅಂಗಡಿಗಳ ಮಾಲೀಕರು ಸ್ವತಃ ತಾವೇ ಹಳ್ಳಿಗಳ ಪೆಟ್ಟಿಗೆ ಅಂಗಡಿಗಳಿಗೆ ರಾಜಾರೋಷವಾಗಿ ಮದ್ಯ ಸರಬರಾಜು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.
ಬಹುತೇಕ ಗ್ರಾಮಗಳಲ್ಲಿ ರಾಜರೋಷವಾಗಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳು ಆಗೊಮ್ಮೆ, ಈಗೊಮ್ಮೆ ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ಮಾಡುತ್ತಾರೆ.
ಗ್ರಾಮೀಣ ಭಾಗದ ಸರಕಾರಿ ಶಾಲೆಗಳು, ಸಮುದಾಯ ಭವನ, ಸರಕಾರಿ ಕಚೇರಿಗಳು ಹಾಗೂ ರೈತರ ಜಮೀನುಗಳಲ್ಲಿ ಹಾಗೂ ನಿರ್ಜನ ಪ್ರದೇಶಗಳಲ್ಲಿ ಮದ್ಯವ್ಯಸನಿಗಳ ಅಡ್ಡೆಗಳಾಗಿ ಮದ್ಯ ಸೇವಿಸಿ ಗಾಜಿನ ಖಾಲಿ ಬಾಟೆಲ್, ಪೌಚ್‍ಗಳನ್ನು ಬಿಸಾಡುತ್ತಿದ್ದು ಇದರಿಂದ ಪರಿಸದ ಮೇಲೆ ನೇರ ದುಷ್ಟಪರಿಣಾಮ ಬೀರುವ ಜತೆಗೆ ಸಂಜೆಯಾದಂತೆ ಕುಡುಕರ ಹಾವಳಿಯಿಂದ ರಸ್ತೆ ಮೇಲೆ ಮಹಿಳೆಯರು , ಯವತಿಯರು ಓಡಾಡುವಂತಿಲ್ಲ. ಅಕ್ರಮ ಮದ್ಯ ಮಾರಾಟದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಮದ್ಯಕ್ಕೆ ದಾಸರಾಗಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವವರೇ ಕಾದು ನೋಡ ಬೇಕಿದೆ.