ಇತ್ತೀಚಿನ ಸುದ್ದಿ
ಅಸ್ತಿ ನೋಂದಣಿಯಲ್ಲಿ ಭಾರಿ ಭ್ರಷ್ಟಾಚಾರ: ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ದಾಳಿ
30/10/2021, 11:32
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಬ್ ರಿಜಿಸ್ಟರ್ ಆಫೀಸ್ ಮೇಲೆ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿ ಕಡತಗಳ ಶೋಧಕಾರ್ಯ ಆರಂಭಿಸಿದ್ದಾರೆ.
ಆಸ್ತಿ ನೋಂದಣಿಗಾಗಿ ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಸಿಕ್ಕಾಪಟ್ಟೆ ಹಣ ಕೀಳುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿ ಬಂದಿರುವ ಹಿನ್ನೆಲೆಯಲ್ಲಿ, ಅಥಣಿ ಸಬ್ ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಪಟ್ಟಣದಲ್ಲಿನ 11 ಕ್ಕೂ ಹೆಚ್ಚು ಬಾಂಡ್ ರೈಟರ್ ಗಳ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗೃಹ ದಳ (ಎಸಿಬಿ) ದ ವತಿಯಿಂದ ದಾಳಿ ನಡೆಸಿದೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನ್ಯಾಮಗೌಡರ ಮಾರ್ಗದರ್ಶನ ಹಾಗೂ ಡಿವೈಎಸ್ಪಿಗಳಾದ ಕರುಣಾಕರ ಶೆಟ್ಟಿ ಮತ್ತು ಮಂಜುನಾಥ ಗಂಗಲ ಅವರ ನೇತೃತ್ವದಲ್ಲಿ 6 ಮಂದಿ ಇನ್ಸಪೆಕ್ಟರ್ ಗಳು ಮತ್ತು 30 ಕ್ಕೂ ಅಧಿಕ ಸಿಬ್ಬಂದಿಯಿಂದ ದಾಳಿ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಬ್ ರಿಜಿಸ್ಟರ್ ಕಚೇರಿ ಮೇಲೆ ನಡೆದಿರುವ ಅತಿದೊಡ್ಡ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ.
ಇನ್ಸಪೆಕ್ಟರ್ ಗಳಾದ ಸುನಿಲಕುಮಾರ, ಅಡಿವೇಶ ಗುದಿಗೊಪ್ಪ, ವೀರಣ್ಣ ಹಳ್ಳಿ, ವಿಜಯ ಮಠಪತಿ, ಸಮೀರ್ ಮುಲ್ಲಾ ಮತ್ತು ಪರಮೇಶ್ವರ ಕವಟಗಿ ಹಾಗೂ ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.