ಇತ್ತೀಚಿನ ಸುದ್ದಿ
ಉಡುಪಿ ಕಣ್ಣಿನ ಆಸ್ಪತ್ರೆಯಿಂದ 4.79 ಲಕ್ಷ ರೂ. ನಗದು ಕಳವು: ಅಂತರ್ ಜಿಲ್ಲಾ ಕಳ್ಳನ ಬಂಧನ
13/10/2021, 19:19
ಉಡುಪಿ(reporterkarnataka.com): ಇಲ್ಲಿನ ಕಣ್ಣಿನ ಆಸ್ಪತ್ರೆಯೊಂದರ ಶೆಟರ್ ಮುರಿದು 4.79 ಲಕ್ಷ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳನೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಕಣ್ಣಿನ ಆಸ್ಪತ್ರೆಯ ಶೆಟರ್‌ನ ಬೀಗವನ್ನು ಮುರಿದು ತಪಾಸಣಾ ಕೊಠಡಿಯ ಡ್ರಾವರ್‌ನ ಚಿಲಕವನ್ನು ಒಡೆದು ಡ್ರಾವರ್‌ನಲ್ಲಿದ್ದ 4,79,000 ರೂ. ನಗದು ಮತ್ತು ಸಿಸಿ ಟಿವಿ ಡಿವಿಆರ್ ಕಳವು ಮಾಡಲಾಗಿತ್ತು. ಈ ಕುರಿತು ಆಸ್ಪತ್ರೆಯ ಡಾ. ಶಕೀಲಾ ಸಚಿನ್ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೋಲಿಸರು ಕೃತ್ಯ ನಡೆದ ಆಸ್ಪತ್ರೆಯ ಆಸುಪಾಸಿನ ಕಟ್ಟಡ , ಮನೆ , ಅಂಗಡಿಗಳಲ್ಲಿರುವ ಸಿಸಿ ಕ್ಯಾಮರಾ ಪುಟೇಜ್‌ಗಳನ್ನು ಪರಿಶೀಲನೆ ಮಾಡಿ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುರೇಶ್ ಪೂಜಾರಿ ಯನ್ನು ಬಂಧಿಸಿದ್ದಾರೆ. ಆರೋಪಿ ಮುಂಜಾನೆ 5.30 ಗಂಟೆಯ ಸುಮಾರಿಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಯಿತು.
ಆರೋಪಿ ಈ ಹಿಂದೆ ಶಿರ್ವ, ಹಿರಿಯಡ್ಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ , ಬೆಳಗಾಂ, ಮೂಲ್ಕಿ ಗಳಲ್ಲಿ ಕಳ್ಳತನ ನಡೆಸಿದ್ದು, ಇತ್ತಿಚೆಗೆ ಉಡುಪಿಯ ಲಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಲ್ಪೆ ಸೋಸೈಟಿ ಯಲ್ಲಿ ನಗದು ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಒಟ್ಟು 4.33 ಲಕ್ಷ ರೂ., 2 ಮೋಟಾರ್ ಸೈಕಲ್‌ಗಳು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಆರೋಪಿಯ ಪತ್ತೆಗೆ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಅವರ ಆದೇಶದಂತೆ ಕುಮಾರಚಂದ್ರ (ಹೆಚ್ಚುವರಿ ಪೊಲೀಸ್ ಅಧೀಕ್ಷಕರು), ಸುಧಾಕರ ಸದಾನಂದ ನಾಯ್ಕ್,( ಡಿವೈಎಸ್‌ಪಿ ಉಡುಪಿ ) ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್. ಆರ್, ಪ್ರಸಾದ್‌ಕುಮಾರ್, ಎಎಸ್‌ಐ ಜಯಕರ, ಅರುಣ್ ಸಿಬ್ಬಂದಿಯವರಾದ ಲೋಕೇಶ್, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್ ಅಹಮ್ಮದ್, ರಾಜೇಶ್, ದೇವರಾಜ್, ಕಿರಣ್, ಚೇತನ್, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್, ಕಾರ್ತಿಕ್, ಲಿಂಗರಾಜು, ರಾಕೇಶ್‌ರವರು ಪಾಲ್ಗೊಂಡಿದ್ದರು.
ಆರೋಪಿ ಸುರೇಶ್ ಪೂಜಾರಿ ಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.