ಇತ್ತೀಚಿನ ಸುದ್ದಿ
ಪವಿತ್ರ ಭೂದೃಶ್ಯ: ಭಾರತದ ಸ್ಥಳೀಯ ಪರಂಪರೆಯ ಪರಿಸರ ಸಂರಕ್ಷಣಾ ತಾಣಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
13/09/2026, 14:03
ಮಂಗಳೂರು(reporterkarnataka.com): ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ವತಿಯಿಂದ “Sacred Landscape: Ecological Sanctuaries of India’s Indigenous Heritage” ಪವಿತ್ರ ಭೂದೃಶ್ಯ: ಭಾರತದ ಸ್ಥಳೀಯ ಪರಂಪರೆಯ ಪರಿಸರ ಸಂರಕ್ಷಣಾ ತಾಣಗಳು, ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು.
ಭಾರತದ ಸ್ಥಳೀಯ ಸಮುದಾಯಗಳ ಸಾಂಪ್ರದಾಯಿಕ ಜ್ಞಾನ, ಪವಿತ್ರ ಭೂದೃಶ್ಯಗಳು, ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರದೊಂದಿಗೆ ಮಾನವನಿಗಿರುವ ಆಳವಾದ ಸಂಬಂಧವನ್ನು ವಿಚಾರ ಸಂಕಿರಣದಲ್ಲಿ ಚರ್ಚಿಸಲಾಯಿತು. ಸ್ಥಳೀಯ ಸಮುದಾಯಗಳು ತಲೆತಲಾಂತರಗಳಿಂದ ಅನುಸರಿಸಿಕೊಂಡು ಬಂದಿರುವ ಪರಿಸರ ಸಂರಕ್ಷಣಾ ಪದ್ಧತಿಗಳು ಇಂದಿನ ಪರಿಸರ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಬಲ್ಲವು ಎಂಬುದನ್ನು ವಕ್ತಾರರು ಒತ್ತಿಹೇಳಿದರು.
ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಶ್ರೀ ರವಿಶಂಕರ್, IFS, ಉಪ ಅರಣ್ಯ ಸಂರಕ್ಷಣಾಧಿಕಾರಿ, ದಕ್ಷಿಣ ಕನ್ನಡ, ಮಂಗಳೂರು ವಿಭಾಗ ಭಾಗವಹಿಸಿದ್ದರು. ಗೌರವ ಅತಿಥಿಯಾಗಿ ಶ್ರೀ ಶಲೇಟ್ ಪಿಂಟೋ, ಅಧ್ಯಕ್ಷರು, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರಉಪಸ್ಥಿತರಿದ್ದರು. ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ಮಂಗಳೂರಿನ ಪ್ರಾಂಶುಪಾಲರಾದ ಸಿಸ್ಟರ್ ಡಾ. ವೆನಿಸ್ಸಾ AC ಅವರು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.

ವಿಚಾರ ಸಂಕಿರಣವು ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಪರಿಸರಾಸಕ್ತರಿಗೆ ಜ್ಞಾನ ವಿನಿಮಯದ ಉತ್ತಮ ವೇದಿಕೆಯನ್ನು ಒದಗಿಸಿತು. ಭಾರತದ ಪವಿತ್ರ ವನಗಳು, ನೈಸರ್ಗಿಕ ತಾಣಗಳು ಮತ್ತು ಸ್ಥಳೀಯ ಸಂರಕ್ಷಣಾ ಪರಂಪರೆಗಳನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಈ ಸಂದರ್ಭದಲ್ಲಿ ಒತ್ತಿಹೇಳಲಾಯಿತು.
ಸಂತ ಆಗ್ನೆಸ್ ಕಾಲೇಜಿನಲ್ಲಿ ಸ್ಥಾಪನೆಯಾದ ಭಾರತೀಯ ಜ್ಞಾನ ವ್ಯವಸ್ಥೆಗಳ (Indian Knowledge Systems – IKS) ಕೇಂದ್ರದ ಮಹತ್ವವನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಯಿತು. ಭಾರತದ ಶ್ರೀಮಂತ ಸಾಂಪ್ರದಾಯಿಕ ಜ್ಞಾನ, ಸಂಸ್ಕೃತಿ ಮತ್ತು ಪರಿಸರ ಪರಂಪರೆಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ : ಕೇಂದ್ರವು ಮಹತ್ವದ ಪಾತ್ರ ವಹಿಸುತ್ತಿದೆ.
ವಿಚಾರ ಸಂಕಿರಣದ ಸಂಯೋಜಕರಾಗಿ ಡಾ. ಸೋನಿಯಾ ಲೋಬೋ, IQAC ಸಂಯೋಜಕರಾಗಿ ಡಾ. ಸಬೀನಾ ಡಿಸೋಜಾ ಹಾಗೂ KS ಕೇಂದ್ರದ ಸಂಯೋಜಕರಾಗಿ ಡಾ. ವಿಶಾಲಾ B.K.ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಾಟನಿ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಕಾರದಿಂದ ವಿಚಾರ ಸಂಕಿರಣವು ಯಶಸ್ವಿಯಾಗಿ ನೆರವೇರಿತು.
ಭಾರತದ ಪವಿತ್ರ ಭೂದೃಶ್ಯಗಳು, ಸ್ಥಳೀಯ ಜ್ಞಾನ ಮತ್ತು ಪರಿಸರ ಪರಂಪರೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಸಂದೇಶದೊಂದಿಗೆ ವಿಚಾರ ಸಂಕಿರಣವು ಅರ್ಥಪೂರ್ಣವಾಗಿ ಸಮಾಪ್ತಿಗೊಂಡಿತು.












