ಇತ್ತೀಚಿನ ಸುದ್ದಿ
ಮತದಾರರ ಭೇಟಿ ಮಾಡಲು ಹಗ್ಗ ಹಿಡಿದು ನದಿ ದಾಟಿದ ಅಧಿಕಾರಿಗಳು: ಬಿಎಲ್‌ಒಗಳ ಸೇವಾ ನಿಷ್ಠೆಗೆ ಸಾರ್ವಜನಿಕರ ಮೆಚ್ಚುಗೆ
16/07/2026, 18:40
ಸುಬ್ರಹ್ಮಣ್ಯ(reporterkarnataka.com): ಭಾರತ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು ಅನೇಕ ಕಡೆಗಳಲ್ಲಿ ಪಡುತ್ತಿರುವ ಸಂಕಷ್ಟ ಸಾಕಷ್ಟು. ಇವೆಲ್ಲದರ ನಡುವೆಯೂ ಅವರು ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಬಳಿಯ ಐನೆಕಿಡು ಗ್ರಾಮದ ಬಾನೂರಿನಲ್ಲಿ ಬಿಎಲ್‌ಓ ಅಧಿಕಾರಿಗಳ ಕರ್ತವ್ಯ ನಿಷ್ಠೆ ಮತ್ತು ಸಮರ್ಪಣಾ ಭಾವಕ್ಕೆ ಸ್ಥಳೀಯರಿಂದ ಸಾಕಷ್ಟು ಸ್ಪೂರ್ತಿದಾಯಕ ಮಾತುಗಳು ಕೇಳಿ ಬಂದಿವೆ. ಅವರು ಅವರ ಕಾರ್ಯಕ್ಕೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ.
ಕೇವಲ ಮೂರು ಮನೆಗಳ ಈ ಗ್ರಾಮಕ್ಕೆ ತೆರಳಲು ಅವರು ನದಿಗೆ ಬಳಸಿರುವ ಹಗ್ಗದ ಮೂಲಕ ತೆರಳಿ, ತಮ್ಮ ಕರ್ತವ್ಯವನ್ನು ನೆರವೇರಿಸಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಹಗ್ಗದ ಮೂಲಕ ನದಿ ದಾಟಿ ಅವರು ತಮ್ಮ ಕರ್ತವ್ಯ ಮಾಡಿರುವುದು ಇಡೀ ಸುಬ್ರಹ್ಮಣ್ಯದಲ್ಲಿ ಮನೆಮಾತಾಗಿದೆ.
*ಘಟನೆಯ ವಿವರ:*
ಬಾನೂರ್ ಬಳಿಯ ಹೊಳೆಯ ಆಚೆಗೆ ಕೇವಲ ಮೂರು ಮನೆಗಳಿವೆ ಮತ್ತು ಈ ಪ್ರದೇಶಕ್ಕೆ ನೇರ ರಸ್ತೆ ಸಂಪರ್ಕವಿಲ್ಲ. ರಸ್ತೆಯ ಮೂಲಕ ಮನೆಗಳನ್ನು ತಲುಪಲು ಬಾಳುಗೋಡು ಮೂಲಕ ದೀರ್ಘ ತೆರಳುವ ಅನಿವಾರ್ಯತೆ. ಇಲ್ಲಿಂದ ತೆರಳಿದರೆ, ಸುಮಾರು ಒಂದಕ್ಕೂ ಹೆಚ್ಚು ಸಮಯವಕಾಶ ತೆಗೆದುಕೊಳ್ಳಲಿದೆ.
ಆದ್ದರಿಂದ ಈ ಪರಿಸ್ಥಿತಿಯನ್ನು ಪರಿಗಣಿಸಿ, ಬಿಳಿನೆಲೆ ಬೈಲು ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಬಿಎಲ್‌ಒ ಲೋಹಿತ್, ಬಿಎಲ್‌ಎ ಗುಣವರ್ಧನ ಅವರು, ಸ್ಥಳೀಯ ನಿವಾಸಿಗಳು ನಿಯಮಿತವಾಗಿ ಬಳಸುವ ಹಗ್ಗ ವ್ಯವಸ್ಥೆಯನ್ನು ಬಳಸಿಕೊಂಡು ಹೊಳೆ ದಾಟಿದ್ದಾರೆ. ಈ ಹಗ್ಗದ ವ್ಯವಸ್ಥೆಯನ್ನು ದಾಟುವ ಸಂದರ್ಭದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ, ನೀರಿನಲ್ಲಿ ಬೀಳುವ ಅಪಾಯ. ಇದನ್ನು ಲೆಕ್ಕಿಸದ ಅವರು, ಸಾಹಸ ಮಾಡಿ ಗ್ರಾಮಕ್ಕೆ ತೆರಳಿ ತಮ್ಮ ಕರ್ತವ್ಯ ಮುಗಿಸಿದ್ದಾರೆ.
ಅಗತ್ಯ ದಾಖಲೆಗಳು ಮತ್ತು ಸಲಕರಣೆಗಳನ್ನು ತೆಗೆದುಕೊಂಡು, ಹಗ್ಗಕ್ಕೆ ಜೋಡಿಸಲಾದ ಸಾಧನವನ್ನು ಬಳಸಿಕೊಂಡು ಹೊಳೆ ದಾಟಿದರು ಮತ್ತು ಮತದಾರರ ವಿವರಗಳನ್ನು ಪರಿಶೀಲಿಸಲು ಮತ್ತು ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೂರು ಮನೆಗಳಿಗೆ ಭೇಟಿ ನೀಡಿದರು.
ಈ ಮೂರು ಮನೆಗಳ ನಿವಾಸಿಗಳಲ್ಲಿ ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು, ಹೊಳೆ ದಾಟಿ ಪರಿಶೀಲನೆ ಪ್ರಕ್ರಿಯೆಗೆ ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಬಿಎಲ್‌ಒಗಳು ವೈಯಕ್ತಿಕವಾಗಿ ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿತ್ತು. ಆದ್ದರಿಂದ ಅವರು ಈ ಸಾಹಸ ಮಾಡಿ ತಮ್ಮ ಕೆಲಸ ಮಾಡಿದ್ದಾರೆ.
ಪ್ರತಿಯೊಬ್ಬ ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಅಧಿಕಾರಿಗಳು ತೋರಿಸಿದ ಸಮರ್ಪಣೆ ಮತ್ತು ಬದ್ಧತೆಯು ಸ್ಥಳೀಯ ನಿವಾಸಿಗಳಿಂದ ಮೆಚ್ಚುಗೆಯನ್ನು ಗಳಿಸಿದೆ. ಇದೀಗ ಇವರ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಶಿಕ್ಷಕರನ್ನು ಹಾಡಿ ಕೊಂಡಾಡಿದ್ದಾರೆ. ಕೇವಲ ಮೂರು ಮನೆಗಳಿಗೆ ಸಾಹಸ ಮಾಡಿ ತೆರಳಿರುವುದು ಇದೀಗ ಸುಬ್ರಹ್ಮಣ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.


ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಭರ್ತಿ ಮಾಡಿದ ಎನ್ಯುಮರೇಶನ್ (ದತ್ತಾಂಶ) ನಮೂನೆಗಳನ್ನು ಸಲ್ಲಿಸಲು ಸದ್ಯ ವಿಸ್ತರಣೆ ಆಗಿದೆ. ಬಿಎಲ್‌ಒ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯು ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿದೆ. ಆದ್ದರಿಂದ ಪ್ರತಿಯೊಬ್ಬ ಮತದಾರರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಆದ್ಯ ಕರ್ತವ್ಯವಾಗಿದೆ.
ನೀವು ಈಗಾಗಲೇ ಮಾನ್ಯತೆ ಪಡೆದ ಮತದಾರರ ಗುರುತಿನ ಚೀಟಿ ಹೊಂದಿದ್ದರೂ ಸಹ, ಈ ಪರಿಷ್ಕರಣೆಯಲ್ಲಿ ಬಿಎಲ್‌ಒಗಳು ನೀಡುವ ನಮೂನೆಗಳನ್ನು ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ಕರಡು ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆಯಿರುತ್ತದೆ.













