ಇತ್ತೀಚಿನ ಸುದ್ದಿ
ಮಸ್ಕಿ: ದುಷ್ಕರ್ಮಿಗಳಿಂದ ಬೆನಕನಾಳ ಗೃಹರಕ್ಷಕ ಸಿಬ್ಬಂದಿಯ ಮನೆ, ಬೈಕ್ಗೆ ಬೆಂಕಿ
30/06/2026, 23:05
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದ್ದು,ಗೃಹ ರಕ್ಷಕ (ಹೋಂ ಗಾರ್ಡ್) ಸಿಬ್ಬಂದಿಯೊಬ್ಬರ ಮನೆ ಹಾಗೂ ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ.
*ಘಟನೆಯ ವಿವರ:*
ಬೆನಕನಾಳ ಗ್ರಾಮದ ನಿವಾಸಿಯಾದ, ನಾಗಪ್ಪ ಅವರ ಪುತ್ರ ನರಸಿಂಹ ನಾಯಕ್ ಎಂಬುವರು ಗೃಹ ರಕ್ಷಕರ ದಳದಲ್ಲಿ (ಹೋಂ ಗಾರ್ಡ್) ಸೇವೆ ಸಲ್ಲಿಸುತ್ತಿದ್ದಾರೆ.



ಎಂದಿನಂತೆ ರಾತ್ರಿ ಮನೆಯವರು ಮಲಗಿದ್ದ ವೇಳೆ ಬಂದ ಮುಸುಕುಧಾರಿ ಅಥವಾ ಅಪರಿಚಿತ ದುಷ್ಕರ್ಮಿಗಳು, ಇವರ ಮನೆ ಹಾಗೂ ಹೊರಗಡೆ ನಿಲ್ಲಿಸಲಾಗಿದ್ದ ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
*ಸಂಪೂರ್ಣ ಭಸ್ಮ:* ಬೆಂಕಿಯ ಜ್ವಾಲೆ ತೀವ್ರವಾಗಿದ್ದರಿಂದ ನರಸಿಂಹ ನಾಯಕ್ ಅವರಿಗೆ ಸೇರಿದ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು,ಮನೆಗೂ ಕೂಡ ಭಾರೀ ಹಾನಿಯಾಗಿದೆ. ತಡರಾತ್ರಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ಬೆಂಕಿ ನಂದಿಸಲು ಯತ್ನಿಸಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
*ಆತಂಕದಲ್ಲಿ ಗ್ರಾಮಸ್ಥರು:* ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗುವ ಗೃಹ ರಕ್ಷಕ ಸಿಬ್ಬಂದಿಯ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದು ಬೆನಕನಾಳ ಗ್ರಾಮದಲ್ಲಿ ತೀವ್ರ ಆತಂಕ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಳೇ ವೈಷಮ್ಯ ಅಥವಾ ಇನ್ಯಾವುದೋ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು,ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.












