ಇತ್ತೀಚಿನ ಸುದ್ದಿ
ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಪರಿಶೀಲನಾ ಸಭೆ: ಹೆಲ್ತ್ ಕಿಟ್ ವಿತರಣೆ
24/05/2021, 17:44
ಮಂಗಳೂರು(reporterkarnataka news): ಮಂಗಳೂರು ಮಹಾನಗರ ಪಾಲಿಕೆಯ ಟಾಸ್ಕ್ ಫೋರ್ಸ್ ಪ್ರಮುಖರ ಸಭೆಯು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಜೆಪ್ಪು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಶಾಸಕ ಕಾಮತ್ ಮಾತನಾಡಿ, ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್`ಗಳಲ್ಲೂ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಟಾಸ್ಕ್ ಫೋರ್ಸ್ ಕಾರ್ಯ ನಿರ್ವಹಣೆಯ ಕುರಿತು ಇಂದು 6 ವಾರ್ಡಿನ ಟಾಸ್ಕ್ ಫೋರ್ಸ್ ಪ್ರಮುಖರ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಟಾಸ್ಕ್ ಫೋರ್ಸ್ ಸದಸ್ಯರು ತಮ್ಮ ವಾರ್ಡಿನ ಕೋವಿಡ್ ಸೋಂಕಿತರಿಗೆ ಪಾಲಿಕೆ ವತಿಯಿಂದ ನೀಡಲಾಗುವ ಹೆಲ್ತ್ ಕಿಟ್ ವಿತರಿಸುತ್ತಿದ್ದಾರೆ. ಕೋವಿಡ್ ಸೋಂಕಿತರ ಮನೆಗೆ ಸ್ಟಿಕರ್ ಅಂಟಿಸುವುದು, ಅವರ ಆರೋಗ್ಯದ ಕುರಿತು ಮಾಹಿತಿ ಪಡೆದು ಸೂಕ್ತ ನಿರ್ದೇಶನಗಳನ್ನು ನೀಡುವಲ್ಲಿ ಟಾಸ್ಕ್ ಫೋರ್ಸ್ ಸದಸ್ಯರು ನಿರತರಾಗಿದ್ದಾರೆ. ಪ್ರತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಕ್ಸಿ ಮೀಟರ್ ನೀಡಲಾಗಿದೆ. ಕೋವಿಡ್ ಸೋಂಕು ತಗುಲಿದ ವ್ಯಕ್ತಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದಿದ್ದರೆ ಜಿಲ್ಲಾಡಳಿತ ಇ.ಎಸ್.ಐ ಆಸ್ಪತ್ರೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಿದೆ. ಅದರಲ್ಲಿ ಉಳಿದುಕೊಳ್ಳಲು ಅವಕಾಶವಿದೆ ಎಂದು ಹೇಳಿದ್ದಾರೆ.
ಪ್ರತಿಯೊಂದು ವಾರ್ಡಿನಲ್ಲಿಯೂ ಕೂಡ ಕೋವಿಡ್ ಸೋಂಕು ತಗಲಿ ತೀವ್ರತರದ ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವವರೊಂದಿಗೆ ನಮ್ಮ ಪಕ್ಷದ ಎಲ್ಲಾ ಕಾರ್ಪೋರೇಟರ್`ಗಳು ದೂರವಾಣಿ ಸಂಪರ್ಕದಲ್ಲಿದ್ದಾರೆ. ಯಾರಿಗೂ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಸದಸ್ಯರ ಕಾರ್ಯವು ಶ್ಲಾಘನೀಯ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕಿತರಿಗೆ ಸಹಾಯಕ್ಕಾಗಿ ಟಾಸ್ಕ್ ಫೋರ್ಸ್ ಸದಸ್ಯರಿಗೆ ಶಾಸಕ ವೇದವ್ಯಾಸ್ ಗೌರವ ಸಲ್ಲಿಸಿದರು.
ಈಗಾಗಲೇ ಕೋವಿಡ್ ಸೋಂಕಿತ ವ್ಯಕ್ತಿಯು ಮನೆಯಲ್ಲಿಯೇ ಉಳಿದುಕೊಂಡಿದ್ದರೆ, ಮನೆಯವರಿಗೂ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಹರಡುವ ಸಾಧ್ಯತೆಯಿದೆ. ಹಾಗಾಗಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರೂ ಕೂಡ ಕೋವಿಡ್ ಪರೀಕ್ಷೆಗೆ ಒಳಪಡುವುದು ಉತ್ತಮ. ಮನೆಯಲ್ಲಿಯೇ ಉಳಿದುಕೊಂಡಿರುವ ಕೋವಿಡ್ ಸೋಂಕಿತರು ಆರೋಗ್ಯದ ಕುರಿತು ವೈದ್ಯರ ಸಲಹೆ ಪಡೆಯುತ್ತಿರಬೇಕು. ಆರೋಗ್ಯದಲ್ಲಿ ಏರುಪೇರು ಆದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗದಂತೆ ಎಚ್ಚರವಹಿಸ ಬೇಕು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಸಭೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಶೈಲೇಶ್ ಶೆಟ್ಟಿ ಅತ್ತಾವರ, ಭರತ್ ಸೂಟರ್`ಪೇಟೆ, ಭಾನುಮತಿ, ರೇವತಿ, ಪಾಲಿಕೆ ಜಂಟಿ ಆಯುಕ್ತ ಸಂತೋಷ್, ಟಾಸ್ಕ್ ಫೋರ್ಸ್ ಪ್ರಮುಖರು ಉಪಸ್ಥಿತರಿದ್ದರು.