ಇತ್ತೀಚಿನ ಸುದ್ದಿ
ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ: ಕೇಜ್ರೀವಾಲ್ ಜತೆ ಸೋನು ಮಾತನಾಡಿದ್ದು ಏನು?
15/09/2021, 19:37
ಮುಂಬೈ(reporterkarnataka.com): ಬಾಲಿವುಡ್ ನಟ, ಸಮಾಜ ಸೇವಕ, ಮಹಾನ್ ದಾನಿ ಸೋನು ಸೂದ್ ಅವರ ಮುಂಬೈ ಕಚೇರಿ ಸೇರಿದಂತೆ 6 ಕಡೆಗಳಿಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಮುಂಬೈನಲ್ಲಿ ಅವರ ನಿವಾಸ ಹಾಗೂ ಲಕ್ನೋದ ಕಂಪನಿಯು ಸೇರಿದಂತೆ ಅವರಿಗೆ ಸಂಬಂಧಿಸಿದ ಒಟ್ಟು 6 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಸೋನು ಅವರ ಆದಾಯದ ಮೂಲಗಳಿಗೆ ಸಂಬಂಧಿಸಿದಂತೆ ಅವರ ಕಚೇರಿಯಲ್ಲಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಐಟಿ ದಾಳಿ ನಡೆದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನಟ ಸೋನು ಸಾವಿರಾರು ಮಂದಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ವಿಶೇಷವಾಗಿ ಲಾಕ್‌ಡೌನ್‌ನಲ್ಲಿ ಬೇರೆ ರಾಜ್ಯ ಅಥವಾ ಬೇರೆ ಊರುಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಮರಳಿ ಊರಿಗೆ ಕಳುಹಿಸಲು ನೆರವಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋನುಸೂದ್ ಹೆಸರು ಪ್ರಖ್ಯಾತಿಗೊಂಡಿತ್ತು. ಇತ್ತೀಚೆಗೆ ದೆಹಲಿ ಸರ್ಕಾರದ ‘ದೇಶ್ ಕೆ ಮಂಟರ್ಸ್’ ನ ಬ್ರಾಂಡ್ ಅಂಬಾಸಿಡರ್ ಆಗಿ ಅವರು ನೇಮಕಗೊಂಡಿದ್ದರು.