ಇತ್ತೀಚಿನ ಸುದ್ದಿ
ಕೂಡ್ಲಿಗಿ: ಜಗತ್ತನ್ನು ಜೋಪಾನ ಮಾಡುವ ಅನ್ನದಾತರ ದೈವ ಜೋಕುಮಾರ; ಬೊಪ್ಪಲಾಪುರದಲ್ಲಿ ಸಂಭ್ರಮದ ಆಚರಣೆ
15/09/2021, 00:18
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಹುಟ್ಟಿದ ಜೋಕುಮಾರ “ಜೋಕ” ಎಂಬ ಮುನಿಯ ಮಗನೆಂದೂ, ವಿಶ್ವಕ್ಕೆ ಅನ್ನವ ನೀಡುವ ರೈತರ ಆರಾಧ್ಯ ದೇವ ಶ್ರೀಜೋಕುಮಾರ ಎಂದು ಜಾನಪದ ಸಿರಿ ಸಾರುತ್ತಿದೆ.
ಈತನು ಜೇಷ್ಠಾ ದೇವಿಯ ಮಗನೆಂದೂ ಹೇಳಲಾಗುತ್ತಿದೆ. ಆತನು ಶಿವನ ಗಣಗಲ್ಲಿರುವವನು ಆತ ಗಣಪತಿಯೊಂದಿಗೆ ಬರುವನು. ಆದರೆ ಆತನಿಗೆ 7 ದಿನಗಳ ಆಯಸ್ಸು ಎಂದು ಜಾನಪದ ಕಥೆಯಿಂದ ತಿಳಿಯಬಹುದಾಗಿದೆ.
ಒಮ್ಮೆ ಮಳೆಹೋಗಿ ಕ್ಷಾಮ ಕಾಣಿಸಿಕೊಳ್ಳುತ್ತದೆ. ಆಗ ಜೋಕುಮಾರ ತನ್ನ ಕುದುರೆ ಏರಿ ಹೊಲಗದ್ದೆಗಳಲ್ಲಿ ಸಂಚರಿಸುತ್ತಾನೆ. ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡಗಳು ಮಳೆ ಸುರಿಸುತ್ತವೆ ಎಂಬ ಕಥೆಯಲ್ಲಿ ಉಲ್ಲೇಖವಾಗಿದೆ.
ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನು ಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿ ಅವಳನ್ನು ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬ ಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಜೋಕುಮಾರನನ್ನು ವರ್ಣಿಸಲಾಗುತ್ತದೆ.
ಮೂರ್ತಿ ನಿರ್ಮಾಣ: ಶ್ರೀಜೋಕುಮಾರ ಹುಟ್ಟುವುದು ವಿಶ್ವಕರ್ಮರ ಮನೆಯಲ್ಲಿ ಮಣ್ಣಿನಿಂದ ತಿದ್ದಿ,ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಕಪ್ಪು ಮೇಣದ ಹೊಳಪಿನ ಮೂರ್ತಿ ಇದಾಗಿರುತ್ತದೆ. ಮೂರ್ತಿ ಮಾಡಿದವರಿಗೆ ಕೊಡಬೇಕಾದ ಗೌರವ ಧನದೊಂದಿಗೆ, ಎಲೆ. ಅಡಿಕೆ, ಉಲುಪಿ(ಹಿಟ್ಟು,ಬೇಳೆ,ಬೆಲ್ಲ,ಅಕ್ಕಿ) ಕೊಟ್ಟು ಪೂಜಿಸಿ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆಗೆ ತರುತ್ತಾರೆ.
ಗೌಡರ ಮನೆಯಲ್ಲಿ ಪೂಜೆಯಾದ ನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸುತ್ತಾರೆ. ಬೆಣ್ಣೆಯನ್ನು ಬಾಯಿಗೆ ಸವರಿ ಏಳು ದಿನಗಳ ಕಾಲ ಊರಿನ ಪ್ರತಿ ಮನೆಮನೆಗೂ ಜೋಕುಮಾರನನ್ನು ಕರೆದುಕೊಂಡು ಹೋಗುತ್ತಾರೆ.
ಮೆರವಣಿಗೆ: ವಾಲ್ಮೀಕಿ ಜನಾಂಗದ,ಕೋಲಕಾರ, ಕಬ್ಬಲಿಗರ, ಅಂಬಿಗರ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ. ಆ ಹಾಡುಗಳಲ್ಲಿ ಆತನ ಜನನ, ಉಡಾಳತನ, ಆತನ ಕೊಲೆ, ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತವೆ. ಮನೆಯವರು ಕೊಡುವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು, ಒಂದಿಷ್ಟು ನುಚ್ಚನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ.ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬೊಪ್ಪಲಾಪುರ ಗ್ರಾಮದಲ್ಲಿ, ಸಾಂಪ್ರದಾಯಿಕವಾಗಿ ಜೋಕುಮಾರನನ್ನು ಮೆರೆಸಲಾಯಿತು. ಹಗರಿಮೊಮ್ಮನಹಳ್ಳಿ ತಾಲೂಕು ಹನಸಿ ಗ್ರಾಮದ ಬಾರಿಕರ ಜನಾಂಗದವರಾದ ಕೆಂಚಮ್ಮ ಹಾಗೂ ಸಂಗಡಿಗರು, ಏಳು ದಿನ ಏಳು ಊರುಗಳಲ್ಲಿ ಜೋಕುಮಾರನನ್ನು ತಲೆಯಮೇಲೆ ಹೊತ್ತು ಮೆರಸುತ್ತಾರೆ. ಈ ಸಂದರ್ಭದಲ್ಲಿ ಬೊಪ್ಪಲಾಪುರದ ಗ್ರಾಮದ ಬಣಕಾರ ಚನ್ನಬಸಪ್ಪ ರವರು, ಜೋಕುಮಾರನ ಪುಟ್ಟಿಯನ್ನು ನಿಯಮದಂತೆ ಎತ್ತುವ ಮೂಲಕ.ಮಳೆ ಫಲವನ್ನು ಕೇಳುವ ಸಾಂಪ್ರದಾಯಿಕ ಮಳೆ ಪ್ರೆಶ್ನೆ ಕೇಳುವ ಶಾಸ್ತ್ರ ಮಾಡಿದರು. ಈ ಸಂದರ್ಭದಲ್ಲಿ ಜೋಕುಮಾರ ಉತ್ತಮ ಮಳೆ ಬೆಳೆ ಫಲ ನೀಡುವುದಾಗಿ ಜೋಕುಮಾರ ಅಭಯ ನಿತ್ತಿದ್ದಾನೆಂದು ಬಣಕಾರ ಚನ್ನಬಸಪ್ಪ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮಹಿಳೆಯರು ಹಾಗೂ ಮಕ್ಕಳು,ರೈತರು ಹಾಗೂ ಜೋಕುಮಾರನನ್ನು ಹೊತ್ತು ಮೆರೆಯುವ ಹನಸಿ ಗ್ರಾಮದ ಬಾರಿಕರ ಮಹಿಳೆಯರು ಉಪಸ್ಥಿತರಿದ್ದರು.
ಶಾಪ: ಹುಣ್ಣಿಮೆಯಂದು ರಾತ್ರಿ ಮಧ್ಯರಾತ್ರಿಯನಂತರವೇ ಜೋಕುಮಾರನನ್ನು ಹೊತ್ತು ಕೇರಿಗೆ ಕರೆತರುತ್ತಾರೆ. ಕೇರಿಯ ಚಾವಡಿಯಲ್ಲೊಬ್ಬ ಬೆನ್ನು ಹಿಂದಕ್ಕೆ ಮಾಡಿಯೇ ಜೋಕುಮಾರನ ಬುಟ್ಟಿಯನ್ನು ತೆಗೆದುಕೊಳ್ಳುತ್ತಾನೆ. ಇಲ್ಲಿಯೂ ಬುಟ್ಟಿ ಕೊಡುವವ, ತೆಗೆದುಕೊಳ್ಳುವವ ಪರಸ್ಪರ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುವಂತಿಲ್ಲ. ನಂತರ ಬುಟ್ಟಿಯಲ್ಲಿದ್ದ ಕಡುಬುಗಳನ್ನು ತೆಗೆಯುತ್ತಾರೆ. ಅದೇ ಸಮಯದಲ್ಲಿ ಚಾವಡಿ ಕಟ್ಟೆಯ ಮೇಲೆ ಜೋಕುಮಾರನ ಬುಟ್ಟಿಯ ಸಮೀಪ ಬಾರಿ ಮುಳ್ಳಿನ ಕಂಟಿಯನ್ನಿಟ್ಟಿರುತ್ತಾರೆ.
*ಸಾವು (ಆಚರಣೆ ಕಡೆಯ ಕ್ಷಣ, ಹಲವು ವೈವಿಧ್ಯಮಯ ಆಚರಣೆ)*-
ಜೋಕುಮಾರ ವಿಲಾಸಿ ಜೀವಿಯಾಗಿದ್ದು ವೇಶ್ಯೆಯರ ಸಹವಾಸಿಯಾಗಿರುತ್ತಾನೆಂದು, ಚಾವಡಿಯಲ್ಲಿಟ್ಟಿರುವ ಜೋಕುಮಾರನ ಬುಟ್ಟಿಯ ಸುತ್ತಲೂ ಸುತ್ತುತ್ತಿರಬೇಕಾದರೆ ಪಕ್ಕದಲ್ಲಿರಿಸಲಾಗಿರುವ ಮುಳ್ಳಿನ ಕಂಟಿ ಅವರ ಸೀರೆಗೆ ಸಿಕ್ಕಿ ಹಾಕಿಕೊಳ್ಳುತ್ತದೆ.
ಆ ಸೀರಿಯನ್ನು ಜಗ್ಗಿದಾಗ “ಜೋಕುಮಾರ ನಮ್ಮನ್ನು ಹಿಡಿದುಕೊಳ್ಳಲು ಬಂದ, ನಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ” ಎಂದು ಭೂಮ್ಯಾಕಾಶ ಬಿರಿಯುವಂತೆ ಬಾಯಿ ಮಾಡ ತೊಡಗುತ್ತಾರೆ.
ಅದನ್ನು ಕೇಳಿದವರೆಲ್ಲ ಓಡಿ ಬಂದು ಜೋಕುಮಾರನನ್ನು ಒಣಕೆಯಿಂದ ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕುತ್ತಾರೆ,
ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ.
ಮರಳಿ ಕಣ್ಣು ಕಳೆದುಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯರೊಬ್ಬರು, ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಬಾವಿಯಲ್ಲಿ ಎಸೆಯುವುದು ಸಂಪ್ರದಾಯ.
ಕೊನೆಯ ದಿನ ಗುರುತಿಸಿದ ಮನೆಯಲ್ಲಿ ಜೋಕುಮಾರನ ಮೂರ್ತಿಗೆ ಚೂರಿ ಹಾಕುವರು, ನಂತರ ಜೋಕುಮಾರ ಸತ್ತನೆಂದು ಅಗಸರ ಬಂಡೆ ಅಡಿ ಮಣ್ಣಿನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುವರು.
ಜೋಕುಮಾರನ ಅಳಲು(ಶ್ರಾದ್ಧಾ); ಸಾಂಪ್ರದಾಯಿಕ ಆಚರಣೆಯಲ್ಲಿ ಏಳೇ ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ,ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೈತರು ಕುಟುಂಬ ಸಮೇತ ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ, ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡುಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ,ಒಡವೆ-ವಾಹನ ಖರೀದಿಸುವಂತಿಲ್ಲ, ಶುಭಕಾರ್ಯ ಮಾಡುವಂತಿಲ್ಲ ಎಂಬುದು ಜಾನಪದ ಹಾಗೂ ಸಾಂಪ್ರದಾಯಿಕ ನಿಯಮವಾಗಿದೆ.
ಜೋಕುಮಾರನ ಮರೆಯುವುದು: ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ, ಕೆರೆಯ ಸಮೀಪವೋ, ನದಿ ದಂಡೆಗೋ ಒಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ ಬಟ್ಟೆಗಳನ್ನು ಒಗೆಯುವಂತಿಲ್ಲ. ಜೋಕುಮಾರನನ್ನು ಬಿಸಾಕಿದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ.
ಜೋಕುನಾರನ ಹಾಡು: ಅಡ್ಡಡ್ಡ ಮಳೆ ಬಂದು..ದೊಡ್ಡ ದೊಡ್ಡ ಕೆರೆ ತುಂಬಿ..,ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ..ಜೋಕುಮಾರ…
ಜೋಕುಮಾರ.. ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ.., ಮುಡಿತುಂಬಾ ಹೂವ ಮುಡಿದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ… ಎಂಬ ಜಾನಪದ ಹಾಡು ಜೋಕುಮಾರನ ಸಿರಿಯನ್ನು ಸಾರುತ್ತದೆ. ಇದು ಅರವತ್ತರ ಆಚೆಯ ಮಹಿಳೆಯರಲ್ಲಿ ವೃದ್ಧರಲ್ಲಿ ಕೇಳಬಹುದೇ ವಿನಹಃ,ಹೊರತು ಪಡಸಿದಂತೆ ಗ್ರಂಥಗಳಲ್ಲಿ ಮಾತ್ರ ಜಾನಪದ ಮುದ್ರಣ ರೂಪದಲ್ಲಿ ಸಿಗಲಿವೆಯಷ್ಟೆ.