ಇತ್ತೀಚಿನ ಸುದ್ದಿ
ಜೀವ ರಕ್ಷಕ ಅಂಬ್ಯಲೆನ್ಸ್ ವಾಹನವನ್ನೇ ಕದ್ದ ಖದೀಮ ಕಳ್ಳ: ಹಾಸನದಲ್ಲಿ ಉಪ್ಪಿನಂಗಡಿ ಪೊಲೀಸರಿಂದ ಲಾಕ್
22/12/2025, 20:08
ಉಪ್ಪಿನಂಗಡಿ(reporterkarnataka.com):ತುರ್ತುಚಿಕಿತ್ಸೆಗೆ ರೋಗಿಗಳನ್ನು,ಅಪಘಾತಕ್ಕೀಡಾದವರನ್ನು ಕೊಂಡೊಯ್ಯುವ ಅಂಬ್ಯಲೆನ್ಸ್ ವಾಹನವನ್ನೇ ಖದೀಮನೊಬ್ಬ ಕದ್ದೊಯ್ದ ವಿಲಕ್ಷಣ ಘಟನೆಯೊಂದು ಗುಂಡ್ಯ ಚೆಕ್ ಪೋಸ್ಟ್ ಬಳಿ ನಡೆದಿದೆ.
ಶಿರಾಡಿ ನಿವಾಸಿ ಸುರೇಶ್ ಎಂಬವರು ಅಂಬ್ಯಲೆನ್ಸ್ ವಾಹನ ನಂಬ್ರ: KA-19-C-7557 ಇದರ ಚಾಲಕರಾಗಿದ್ದು, ಪ್ರತಿ ದಿನ ರಾತ್ರಿ ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿ ಲಾಕ್ ಮಾಡಿ ಮನೆಗೆ ಹೋಗುತ್ತಿದ್ದರು. ಎಂದಿನಂತೆ ಡಿಸೆಂಬರ್ 19ರಂದು ರಾತ್ರಿ ಕೂಡಾ ಗುಂಡ್ಯ ಚೆಕ್ ಪೋಸ್ಟ್ ಬಳಿ ಆಂಬ್ಯುಲೆನ್ಸ್ ನಿಲ್ಲಿಸಿ, ಅಪಘಾತದ ಬಗ್ಗೆ ತುರ್ತು ಕರೆ ಬಂದಾಗ ಬದಲಿ ಚಾಲಕರ ಅನುಕೂಲತೆಗಾಗಿ ಕೀಯನ್ನು ಅಂಬ್ಯುಲೆನ್ಸ್ ನಲ್ಲೇ ಇಟ್ಟು ಹೋಗಿದ್ದರು. ಆದರೆ ಮರುದಿನ ಡಿಸೆಂಬರ್ 20ರಂದು ಬೆಳಗ್ಗೆ ಅವರು ಅಂಬ್ಯುಲೆನ್ಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಅಂಬ್ಯುಲೆನ್ಸ್ ಕಳವಾಗಿತ್ತು.
ಈ ಬಗ್ಗೆ ಚಾಲಕ ಸುರೇಶ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಆರಂಭಿಸಿದ ಉಪ್ಪಿನಂಗಡಿ ಪೊಲೀಸರು 20ರಂದು ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋಧನ್ (22) ಎಂಬಾತನನ್ನು ಹಾಸನದಲ್ಲಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೈನ್ಸ್ ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.












