ಇತ್ತೀಚಿನ ಸುದ್ದಿ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಅಥಣಿಯಲ್ಲಿ ಕನ್ನಡಾಂಬೆಯ ಜ್ಯೋತಿ ರಥಯಾತ್ರೆ ಅದ್ದೂರಿ ಮೆರವಣಿಗೆ
06/10/2024, 22:28

ಶಿವರಾಯ ಲಕ್ಷ್ಮಣ ಕರ್ಕರಮುಂಡಿ
info.reporterkarnataka@gmail.com
ಕನ್ನಡ ನಾಡು-ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ. ಕನ್ನಡ ಸಾಹಿತ್ಯದ ಮಹತ್ವವನ್ನು ಸಾರುವ ಈ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸೋಣ ಎಂದು ಅಥಣಿ ಪುರಸಭೆ ಅಧ್ಯಕ್ಷ ಶಿವಲೀಲಾ ಸದಾಶಿವ ಬುಟಾಳಿ ಹೇಳಿದರು.
ಅವರು ಅಥಣಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡಾಂಬೆಯ ಜ್ಯೋತಿ ರಥಕ್ಕೆ ಪೂಜಿ ಸಲ್ಲಿಸಿ ಮಾತನಾಡಿದರು.
ಸ್ವಾಗತ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ತಹಶೀಲ್ದಾರ ಶಿದರಾಯ ಬೋಸಗೆ ಅವರು ಸಮ್ಮೇಳನದ ರಥದಲ್ಲಿನ ಕನ್ನಡದ ತಾಯಿ ಶ್ರೀ ಭುವನೇಶ್ವರಿ ಮೂರ್ತಿಗೆ ಪೂಜೆಯ ಸಲ್ಲಿಸಿ ವಿವಿಧ ಕಲಾತಂಡಗಳ ಮೆರವಣಿಗೆಯ ಮೂಲಕ ರಾಯಬಾಗ್ ತಾಲೂಕಿಗೆ ಬೀಳ್ಕೊಡುವ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬರುವ ಡಿಸೆಂಬರ್ 20, 21 ಮತ್ತು 22 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಹಮ್ಮಿಕೊಂಡಿದೆ. ಈ ಸಮ್ಮೇಳನದ ಮಹತ್ವ ಸಾರುವ ಉದ್ದೇಶದಿಂದ ರಾಜ್ಯದ್ಯಂತ ಈ ಕನ್ನಡಾಂಬೆಯ ಜ್ಯೋತಿ ರಥ ಯಾತ್ರೆ ಸಂಚರಿಸುತ್ತಿದೆ. ತಾಲೂಕ ಆಡಳಿತದಿಂದ ಈ ರಥಯಾತ್ರೆಯನ್ನು ಕನ್ನಡ ಅಭಿಮಾನ ಹಾಗೂ ಗೌರವದಿಂದ ಬರಮಾಡಿಕೊಂಡು ಇಂದು ಭಾನುವಾರ ಮುಂಜಾನೆ ಕ್ರಾಂತಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಭವ್ಯ ಮೆರವಣಿಗೆಯ ಮೂಲಕ ರಾಯಬಾಗ ತಾಲೂಕಿಗೆ ಬಿಳ್ಕೊಡು ಕಾರ್ಯಕ್ರಮದಲ್ಲಿ
ಸ್ವಾಭಿಮಾನದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ಕನ್ನಡ ಅಭಿಮಾನಿಗಳಿಗೆ, ಸಾಹಿತಿಗಳಿಗೆ, ಕನ್ನಡಪರ ಸಂಘಟನೆಯ ಪದಾಧಿಕಾರಿಗಳಿಗೆ, ಕಲಾವಿದರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಯವರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸದಾಶಿವ ಬುಟಾಳಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ತಾಲೂಕ ಆರೋಗ್ಯ ಅಧಿಕಾರಿ ಡಾ. ಬಸಗೌಡ ಕಾಗೆ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಕ್ಷೇತ್ರದ ಶಿಕ್ಷಣ ಅಧಿಕಾರಿ ಎಂ ಬಿ ಮೋರಟಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರೇಣುಕಾ ಹೊಸಮನಿ, ಎಸಿಡಿಪಿಓ ಮಂಜುನಾಥ, ಬಿಸಿಎಂ ಇಲಾಖೆ ಅಧಿಕಾರಿ ವೆಂಕಟೇಶ ಕುಲಕರ್ಣಿ, ಸಾಹಿತಿ ದೇವೆಂದ್ರ ಬಿಸ್ವಾಗರ, ಕನ್ನಡಪರ ಹೋರಾಟಗಾರ ಅಣ್ಣಾಸಾಬ ತೆಲಸಂಗ. ಉದಯ ಮಾಕಾಣಿ , ರಾಜು ವಾಘಮಾರೆ, ಶಬ್ಬೀರ ಸಾತಬಚ್ಚಿ, ಗ್ರಾಮ ಆಡಳಿತ ಅಧಿಕಾರಿಗಳಾದ ಎಂ ಎಂ ಮಲ್ಲುಕಾನ, ಎಂ ಎಂ ಮಿರ್ಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಅಧಿಕಾರಿಗಳು ಮತ್ತು ಅವರ ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.