ಇತ್ತೀಚಿನ ಸುದ್ದಿ
’74ರ ಮಾರಿ ಬೊಲ್ಲ’: ದಕ್ಷಿಣ ಕನ್ನಡ ಜಿಲ್ಲೆ ಕಂಡ ಭೀಕರ ಪ್ರವಾಹಕ್ಕೆ ಜುಲೈ 26ಕ್ಕೆ 50 ವರ್ಷ
22/07/2024, 16:38
ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಹೌದು. … 1974ರಲ್ಲಿ ಜಡಿಮಳೆಗೆ ದಕ್ಷಿಣ ಕನ್ನಡ ಜಿಲ್ಲೆ
ಅಕ್ಷರಶಃ ನಲುಗಿ ಹೋಗಿತ್ತು. ಬಂಟ್ವಾಳ, ಪಾಣೆಮಂಗಳೂರು,
ನಂದಾವರ, ಸರಪಾಡಿ, ಕಡೇಶ್ವಾಲ್ಯ, ಉಪ್ಪಿನಂಗಡಿ ಪ್ರವಾಹಕ್ಕೆ ತುತ್ತಾಗಿತ್ತು. ಜಿಲ್ಲೆಯ ಜೀವನದಿಯಾದ ನೇತ್ರಾವತಿ ರೌದ್ರಾವತಾರ ತಾಳಿತ್ತು. ಕಂಡು ಕೇಳರಿಯದ ರೀತಿಯಲ್ಲಿ ಜಿಲ್ಲೆ ನಲುಗಿ ಹೋಗಿತ್ತು.
ನೇತ್ರಾವತಿಯ ಮುನಿಸಿಗೆ ಸಾವಿರಾರು ಜನರು ಮನೆ ಮಠ ಕಳೆದುಕೊಂಡಿದ್ದರು. ಎತ್ತರದ ಗುಡ್ಡದಲ್ಲಿ ಆಶ್ರಯ ಪಡೆದಿದ್ದರು. ಪ್ರವಾಹದಿಂದ ಬಂಟ್ವಾಳ, ಪಾಣೆಮಂಗಳೂರು, ಉಪ್ಪಿನಂಗಡಿ ಪೇಟೆ ಮುಳುಗಿತ್ತು. ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು. ನೇತ್ರಾವತಿ ನದಿಯ ದಡದಲ್ಲಿದ್ದ ಅನೇಕ ಮನೆಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು. ಆವತ್ತಿನ ಕಾಲದಲ್ಲಿ ಮಣ್ಣಿನ ಗೋಡೆಗಳಿಂದ ನಿರ್ಮಿಸಿದ್ದ ಸಾವಿರಾರು ಹುಲ್ಲಿನ, ಹಂಚಿನ ಮನೆಗಳು ನೆರೆ ನೀರಿಗೆ ಕರಗಿ ಕುಸಿದು ಬಿದ್ದು ಧರಾಶಾಹಿಯಾಗಿದ್ದವು. ಭತ್ತದ ಕೃಷಿ ನೆರೆ ನೀರಿನಲ್ಲಿ ಮುಳುಗಿ ಬೆಳೆ ಸಂಪೂರ್ಣ ಹಾನಿಯಾಗಿತ್ತು. ಹಲವಾರು ಮನೆಗಳ ಸೊತ್ತುಗಳು, ಬಟ್ಟೆಬರೆಗಳು, ಪಾತ್ರೆಪಗಡೆಗಳು, ಪೀಠೋಪಕರಣಗಳು, ಮನೆಯ ಮಾಡು, ದನಕರುಗಳು ನೆರೆಯಲ್ಲಿ ತೇಲಿಕೊಂಡು ಹೋಗುವುದನ್ನು ನೋಡಿದ ಜನ ಭಯಭೀತರಾಗಿದ್ದರು. ದೊಡ್ಡ ದೊಡ್ಡ ಮರಗಳು ಬೇರು ಸಮೇತ ನೆರೆಯಲ್ಲಿ ತೇಲಿಕೊಂಡು ಬಂದು ಪಾಣೆಮಂಗಳೂರು ಸೇತುವೆಯಲ್ಲಿ ಸಿಕ್ಕಿಕೊಂಡಿದ್ದವು. ನದಿಯಲ್ಲಿ ತೆಲಾಡುತ್ತಿರುವ ತೆಂಗಿನಕಾಯಿ, ತೆಂಗಿನ ಮರಗಳು ನಡುಕ ಹುಟ್ಟಿಸುತ್ತಿತ್ತು. ಅನೇಕರು ಮನೆಕಳೆದುಕೊಂಡು ನಿರಾಶ್ರಿತರರಾಗಿ ಕಂಗಾಲಾಗಿದ್ದರು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ, ಕಡೇಶ್ವಾಲ್ಯ ಲಕ್ಷ್ಮೀ ನರಸಿಂಹ, ಸರಪಾಡಿ ಶರಭೇಶ್ವರ, ಪಾಣೆಮಂಗಳೂರು ಭಯಂಕೇಶ್ವರ, ಬಂಟ್ವಾಳ ಮಹಾಲಿಂಗೇಶ್ವರ, ವೆಂಕಟ್ರಮಣ, ನಂದಾವರ ಸೇರಿದಂತೆ ನದಿ ದಡದಲ್ಲಿದ್ದ ಪ್ರಸಿದ್ಧ ದೇವಸ್ಥಾನಗಳು ನೆರೆಯಲ್ಲಿ ಮುಳುಗಿ ಗರ್ಭಗುಡಿಯ ಮುಗುಳಿ ಮಾತ್ರ ಕಾಣುತ್ತಿತ್ತು. ಜನಜೀವನ ಅಸ್ತವ್ಯಸ್ತವಾಗಿತ್ತು.
ಸರಕಾರ, ಆಡಳಿತ ಯಂತ್ರ ಹಗಲಿರುಳೆನ್ನದೆ ಪರಿಹಾರ ಕಾರ್ಯದಲ್ಲಿ ತೊಡಗಿತ್ತು. ಕಾಲೇಜುಗಳ ಎನ್ನೆಸ್ಸೆಸ್ , ಎನ್ ಸಿಸಿ ವಿದ್ಯಾರ್ಥಿಗಳು, ಹಲವು ಸೇವಾ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ಪಾಲ್ಗೊಂಡಿದ್ದವು
ಅಲ್ಲಲ್ಲಿ ತಾತ್ಕಾಲಿಕ ವಸತಿ ಹಾಗೂ ಗಂಜಿಕೇಂದ್ರ(ಕಾಳಜಿ ಕೇಂದ್ರ)ಗಳನ್ನು ತೆರೆದು ಆಹಾರ ಪೂರೈಸಲಾಗಿತ್ತು. ಆ ಬಳಿಕ ಅನೇಕ ಸಂತ್ರಸ್ತರಿಗೆ, ಮನೆ ಕಳೆದುಕೊಂಡವರಿಗೆ ಎತ್ತರ ಪ್ರದೇಶಗಳಲ್ಲಿ ಸರಕಾರದಿಂದ ನಿವೇಶನ ನೀಡಿ ಮನೆ ಕಟ್ಟಿ ಕೊಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು, ಪಾಣೆಮಂಗಳೂರಿನಲ್ಲಿ ನೆರೆ ವಿಮೋಚನಾ ರಸ್ತೆ ನಿರ್ಮಿಸಲಾಯಿತು. ಈಗಲೂ ಕೂಡಾ ಆ ಭೀಕರ ನೆರೆಯನ್ನು ಕಣ್ಣಾರೆ ಕಂಡ ಆಗ ಯುವಕರಾಗಿದ್ದ ಈಗ ಇರುವ ಹಿರಿಯರ ಬಾಯಲ್ಲಿ “ಎಲ್ಪತ್ತ ನಾಲೆತ್ತ ಮಾರಿ ಬೊಲ್ಲ”ಎಂದು ನೆನಪಿಸಿಕೊಂಡು ಭೀಕರತೆಯನ್ನು ಹೇಳುತ್ತಾರೆ.
ಜುಲೈ 26ಕ್ಕೆ 74ರ ಬೊಲ್ಲಕ್ಕೆ 50 ವರ್ಷ ಆಗಲಿದೆ. 74ರ ಜುಲೈ 26 ಶುಕ್ರವಾರವಾಗಿತ್ತು, ಮತ್ತು ಈ ವರ್ಷ ಜುಲೈ 26 ಕೂಡಾ ಶುಕ್ರವಾರವಾಗಿದೆ.
ಈ ವರ್ಷ ನೇತ್ರಾವತಿ ನದಿಯಲ್ಲಿ ಕೆಲವು ದಿನಗಳಿಂದ ರಾಜ್ಯಾದ್ಯಂತ ಧಾರಕಾರ ಮಳೆ ಬಂದರೂ ನೇತ್ರಾವತಿ ನದಿಯಿಂದ ನೆರೆ ಭೀತಿ ಇರಲಿಲ್ಲ. ಉಕ್ಕಿ ಹರಿದ ನದಿ ಅಪಾಯದ ಮಟ್ಟ ತಲಪಿರಲಿಲ್ಲ. ಹವಾಮಾನ ಇಲಾಖೆಯಿಂದ ಹಲವು ಬಾರಿ ರೆಡ್ ಅಲರ್ಟ್ ಘೋಷಣೆಯಾಗಿದ್ದರೂ ಅದೃಷ್ಟವಶಾತ್ ನದಿಯಲ್ಲಿ ಭಾರೀ ನೆರೆ ಬಂದಿಲ್ಲ. ಮಳೆಯಿಂದ ಹಲವೆಡೆ ಮನೆಗಳಿಗೆ ಧರೆಗಳು ಜರಿದು ಬಿದ್ದು ಹಲವಾರು ಅನಾಹುತಗಳಾಗಿವೆ. ಮನೆಗಳ ಮೇಲೆ ಮರಗಳು ಬಿದ್ದ ಘಟನೆಗಳೂ ನಡೆದಿದ್ದು ರಸ್ತೆಗಳಿಗೆ ಮರಗಳು ಬಿದ್ದು ಸಂಚಾರಕ್ಕೆ ಹಲವು ಕಡೆ ಅಡ್ಡಿಯುಂಟಾಯಿತ್ತು. ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಇತ್ತೀಚೆಗೆ ಕಲ್ಲಡ್ಕ ರಸ್ತೆಯಲ್ಲಿ ಕೃತಕ ನೆರೆ ಹರಿದು ದೊಡ್ಡ ಸುದ್ದಿಯಾಯಿತು. ಆಟಿ ತಿಂಗಳು ಆರಂಭವಾಯಿತು. ಕರಾವಳಿಯಲ್ಲಿ ಇನ್ನೂ ನೀರಿನ ಒರತೆ ಸರಿಯಾಗಿ ಆಗಿಲ್ಲ, ಬೇಕಾದಷ್ಟು ಮಳೆಯಾಗಿಲ್ಲವೆಂದು ಹೇಳುತ್ತಾರೆ ರೈತರು.
ಶಾಲಾ ಕಾಲೇಜುಗಳಿಗೆ ನಿರಂತರ ಐದಾರು ದಿನಗಳಿಂದ ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಧಿಕಾರಿಯವರು ರಜೆ ಘೋಷಣೆ ಮಾಡಿದ್ದಾರೆ. ಮಳೆ ಸುರಿಯುತ್ತಲೇ ಇದೆ. ದೇಶಾದ್ಯಂತ ಮಾನ್ಸೂನ್ ಟ್ರಫ್ ಪರಿಣಾಮದಿಂದಾಗಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯ ಆರ್ಭಟ, ನೆರೆಯ ಹಾವಳಿ, ಅನಾಹುತಗಳು ನಡೆಯಿತ್ತಲೇ ಇದೆ. ಪಶ್ಚಿಮ ಸಮುದ್ರದಿಂದ ಬೀಸುತ್ತಿರುವ ಮಾರುತಗಳು ದಕ್ಷಿಣ ಭಾರತದೆಡೆಗೆ ಮುಖಮಾಡಿವೆ. ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ಸುರಿಯುವ ಮಳೆಯ ಭೀತಿ ಎದುರಾಗಿದೆ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಉಗಮ ಸ್ಥಾನಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಶಿರಾಡಿ ಘಾಟ್ ನಲ್ಲಿ ಬೆಟ್ಟಗಳು ರಾಷ್ಟ್ರೀಯ ಹೆದ್ದಾರಿಗೆ ಜಾರುತ್ತಿದೆ. ರಾಜ್ಯಾದ್ಯಂತ ಎಲ್ಲಾ ನದಿಗಳು ಉಕ್ಕಿ ಹರಿದು ಎಲ್ಲೆಡೆ ವರುಣಾವತಾರ ಕಾಣುತ್ತಿದೆ. ನೇತ್ರಾವತಿ ನದಿಯ ನೀರಿನ ಮಟ್ಟ 8.6 ಮೀಟರ್ನಲ್ಲಿದ್ದು ಅಪಾಯದ ಮಟ್ಟ ತಲಪಿತ್ತು.