ಇತ್ತೀಚಿನ ಸುದ್ದಿ
6 ರಾಜ್ಯಗಳ 7 ಸ್ಥಾನಗಳಿಗೆ ಉಪ ಚುನಾವಣೆ: ಎನ್ ಡಿಎ 3, ಇಂಡಿಯಾ 4 ಸೀಟುಗಳಲ್ಲಿ ಗೆಲುವು
09/09/2023, 15:07

ಹೊಸದಿಲ್ಲಿ(reporterkarnataka.com): ಮುಂಬರುವ ಲೋಕಸಭೆ ಚುನಾವಣೆಗೆ ಆಡಳಿತರೂಢ ಎನ್ ಡಿಎ ಹಾಗೂ ಪ್ರತಿ ಪಕ್ಷಗಳ ಮೈತ್ರಿಕೂಟ ಇಂಡಿಯಾ ಹಣಾಹಣಿಗೆ ಸಿದ್ಧತೆ ನಡೆಸುತ್ತಿದ್ದಂತೆ, 6 ರಾಜ್ಯಗಳ 7 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ 4 ಸ್ಥಾನಗಳನ್ನು ಹಾಗೂ ಎನ್ ಡಿಎ 3 ಸ್ಥಾನಗಳನ್ನು ಪಡೆದುಕೊಂಡಿದೆ.
ಇಂಡಿಯಾ ಮೈತ್ರಿಕೂಟ ರಚನೆಯಾದ ಬಳಿಕ ನಡೆದ
ಮೊದಲ ಚುನಾವಣೆ ಇದಾಗಿದೆ. ಇದರಲ್ಲಿ ಇಂಡಿಯಾ ಮೈತ್ರಿಕೂಟ ತಕ್ಕಮಟ್ಟಿಗೆ ಮೇಲುಗೈ ಸಾಧಿಸಿದೆ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕಾಚಾರ ಹಾಕುತ್ತಾರೆ.
ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಳ್ಳುವ ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಭಾರೀ ಅಂತರದಿಂದ ಗೆಲುವು ಸಾಧಿಸಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಧಾಕರ್ ಸಿಂಗ್ 43 ಸಾವಿರ ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಇನ್ನು ತ್ರಿಪುರಾದ ಧನ್ಪುರ ಮತ್ತು ಬೋಕ್ಸಾನಗರದಲ್ಲಿ ಸಿಪಿಎಂ ಅನ್ನು ಸೋಲಿಸಿ ಬಿಜೆಪಿ ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ. ಉತ್ತರಾಖಂಡದ ಬಾಗೇಶ್ವರ ವಿಧಾನಸಭೆ ಕ್ಷೇತ್ರವನ್ನೂ ಬಿಜೆಪಿ ಉಳಿಸಿಕೊಂಡಿದೆ. ತ್ರಿಪುರಾದ ಬೊಕ್ಸಾನಗರ್ ಮತ್ತು ಧನ್ಪುರ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಾದ ತಫಜ್ಜಲ್ ಹೊಸೈನ್ ಮತ್ತು ಬಿಂದು ದೇಬನಾಥ್ ಅವರು ಕ್ರಮವಾಗಿ 30,237 ಮತ್ತು 18,871 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಉತ್ತರಾಖಂಡದ ಬಾಗೇಶ್ವರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಇಲ್ಲಿನ ಅಭ್ಯರ್ಥಿ ಪಾರ್ವತಿ ದಾಸ್ ಅವರು ಕಾಂಗ್ರೆಸ್ ಅಭ್ಯರ್ಥಿ ಬಸಂತ್ ಕುಮಾರ್ ಅವರನ್ನು 2400 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.
ಕೇರಳದ ಪುತ್ತುಪ್ಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಚಾಂಡಿ ಉಮ್ಮನ್ ಅವರು 36,000 ಮತಗಳ ಅಂತರದಿಂದ ಸಿಪಿಎಂ ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರನ್ನು ಸೋಲಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ ಅಭ್ಯರ್ಥಿ ಬೇಬಿ ದೇವಿ ಡುಮ್ರಿ ಉಪಚುನಾವಣೆಯಲ್ಲಿ 17,000 ಮತಗಳ ಅಂತರದಿಂದ ಎಜೆಎಸ್ಯು ಪಕ್ಷದ ಯಶೋದಾ ದೇವಿ ಅವರನ್ನು ಸೋಲಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲ್ ಚಂದ್ರ ರಾಯ್ ಅವರು ಪಶ್ಚಿಮ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಯ ತಪಸಾ ರಾಯ್ ಅವರನ್ನು 4300 ಮತಗಳಿಂದ ಸೋಲಿಸಿದ್ದಾರೆ.
5 ರಾಜ್ಯಗಳ ವಿಧಾನಸಭೆ ಹಾಗೂ 2024ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ.