ಇತ್ತೀಚಿನ ಸುದ್ದಿ
ಕಲರ್ ಫುಲ್ ಮಂಗಳೂರು: ಕಡಲನಗರಿಯ ಫುಟ್ ಪಾತ್ ನಲ್ಲಿ ಬಣ್ಣಬಣ್ಣದ ಹೂವಿನ ಚಿತ್ತಾರ!!
18/09/2023, 12:41

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಗಣೇಶ ಹಬ್ಬಕ್ಕೆ ಕಡಲ ಕಿನಾರೆಯ ಮಂಗಳೂರು ತೆರೆದುಕೊಳ್ಳಲಾರಂಭಿಸಿದೆ. ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕೆ ಅಂತಿಮ ಸಿದ್ಧತೆಗಳು ನಡೆಯುತ್ತಿದೆ. ಇದಕ್ಕೆಲ್ಲ ಬಹು ಮುಖ್ಯವಾದ ವಿವಿಧ ಜಾತಿಯ ಪುಷ್ಪಗಳು ಎರಡು ದಿನಗಳಿಂದ ನಗರಕ್ಕೆ ಬರಲಾರಂಭಿಸಿವೆ.
ಹೂವು ಇಲ್ಲದೆ ಯಾವುದೇ ಮಂಗಳ ಕಾರ್ಯವಿಲ್ಲ. ಮದುವೆ ಇರಲಿ, ಸೀಮಂತ ಇರಲಿ ಹೂವು ಬೇಕೇ ಬೇಕು. ಅದರಲ್ಲೂ ಆರಾಧಾನಾ ವಿಷಯದಲ್ಲಿ ಪುಷ್ಪವೇ ಫೈನಲ್. ಹೂವು ಇಲ್ಲದೆ ಯಾವುದೇ ದೇವ- ದೈವ ಕಾರ್ಯ ನಡೆಯೋದಿಲ್ಲ. ಬೇಲಿ ಬದಿಯ ಒಂದು ಹೂವನಾದ್ದರೂ ಇಟ್ಟು ನಾವು ದೇವರಿಗೆ ಕೈಮುಗಿಯುತ್ತೇವೆ. ಅದರಲ್ಲೂ ವಿಘ್ನ ನಿವಾರಕ ಎಂದು ಕರೆಸಿಕೊಳ್ಳುವ ವಿನಾಯಕನಿಗೆ ಅಲಂಕಾರ ಮಾಡಿದಷ್ಟು ಭಕ್ತರಿಗೆ ತೃಪ್ತಿಯಾಗುವುದಿಲ್ಲ.
ಮಂಗಳೂರಿಗೆ ಹೊರ ಜಿಲ್ಲೆಗಳಿಂದ ಲಾರಿಗಟ್ಟಲೆ ಈಗಾಗಲೇ ಪುಷ್ಪವು ಹರಿದು ಬಂದಿದೆ. ನಗರದ ಆಯಕಟ್ಟಿನ ಪ್ರದೇಶದ ಫುಟ್ ಪಾತ್ ಗಳಿಗೆ ಲೋಡುಗಟ್ಟಲೆ ಹೂವು ಲಗ್ಗೆ ಇಟ್ಟಿದೆ. ಕೆಲವು ಕಡೆಗಳಲ್ಲಿ ಫುಟ್ ಪಾತ್ ಗಳನ್ನೇ ಹೂವಿನ ರಾಶಿ ನುಂಗಿ ಹಾಕಿದೆ. ಇನ್ನು ಕೆಲವು ಕಡೆ ಫುಟ್ ಪಾತ್ ಮೀರಿ ರಸ್ತೆಗೆ ಚಾಚಿದೆ. ವಿಜಯನಗರ ಆಡಳಿತ ಕಾಲದಲ್ಲಿ ಮುತ್ತು ರತ್ನಗಳನ್ನು ಮಾರ್ಗದ ಬದಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದಂತೆ ಇಂದಿನ ಕಾಲದಲ್ಲಿ ಕಡಲನಗರಿಯಲ್ಲಿ ಪುಷ್ಪವನ್ನಿಟ್ಟು ವ್ಯಾಪಾರ ಮಾಡಲಾಗುತ್ತಿದೆ. ಆದರೆ ಹೂವು ಮಾತ್ರ ಬಲು ದುಬಾರಿ.
ಸೇವಂತಿಗೆ ಗುಚ್ಚಕ್ಕೆ 800 ರೂಪಾಯಿ, ಕಾಕಡ ಗುಚ್ಚ -1300, ಜೀನ್ಯ ಗುಚ್ಚ -1500 ಮಾರಾಟವಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳು ಹೇಳಿದ್ದೇ ರೇಟ್. ಹಬ್ಬದ ಸಂದರ್ಭದಲ್ಲಿ ಯಾವುದೇ ಚೌಕಾಶಿ ಕುದುರುವುದಿಲ್ಲ.
ಚೌತಿಗೆ ಸಂಬಂಧಿಸಿದಂತೆ ಶಾಪಿಂಗ್ ಭಾನುವಾರದಿಂದಲೇ ಮಂಗಳೂರಿನಲ್ಲಿ ಆರಂಭವಾಗಿದೆ. ಭಾನುವಾರ ಸಂಜೆ ಸೆಂಟ್ರಲ್ ಮಾರ್ಕೆಟ್ ಪ್ರದೇಶ ಫುಲ್ ಪ್ಯಾಕ್ ಆಗಿತ್ತು. ದ್ವಿಚಕ್ರ, ತ್ರಿಚಕ್ರದವರು ಎಲ್ಲೆಂದರಲ್ಲಿ ನುಗ್ಗಿಸಿ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಒಬ್ಬನೇ ಒಬ್ಬ ಟ್ರಾಫಿಕ್ ಪೊಲೀಸ್ ಸೆಂಟ್ರಲ್ ಮಾರ್ಕೆಟ್ ಪ್ರದೇಶದಲ್ಲಿ ಭಾನುವಾರ ಸಂಜೆ ವೇಳೆ ಕಂಡು ಬರಲಿಲ್ಲ. ಹಾಗೆ ಮಾಲ್ ಗಳು ರಶ್ ಇತ್ತು. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಗೆ ಬಂದಿದ್ದರು. ಒಟ್ಟಿನಲ್ಲಿ ಮಂಗಳೂರು ಕಲರ್ ಫುಲ್ ಆಗಿದೆ.