ಇತ್ತೀಚಿನ ಸುದ್ದಿ
200 ಕೆಜಿ ಗಾಂಜಾ ವಶ: 4 ಮಂದಿ ಆರೋಪಿಗಳ ಬಂಧನ, 2 ವಾಹನ, ಮಾರಕಾಸ್ತ್ರ ಪೊಲೀಸ್ ವಶ
27/05/2021, 07:24
ಮಂಗಳೂರು(reporterkarnataka news):
ಕೇರಳ ಹಾಗೂ ಕರ್ನಾಟಕ ವಿವಿಧ ಕಡೆ ಪೂರೈಸಲು ಸಾಗಿಸಲಾಗುತ್ತಿದ್ದ ಸುಮಾರು 200 ಕೆಜಿ ಗಾಂಜಾದೊಂದಿಗೆ ನಾಲ್ಕರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಸರಗೋಡಿನ ಮುಹಮ್ಮದ್ ಫಾರೂಕ್ (24), ಕುಶಾಲನಗರದ ಸಯ್ಯದ್ ಮುಹಮ್ಮದ್ (31), – ಮಂಗಳೂರು ಮುಡಿಪುವಿನ ಮುಹಮ್ಮದ್ ಅನ್ಸಾರ್ (23), ಮಂಜೇಶ್ವರದ ಮೊಯಿನ್ ನವಾಝ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 2 ವಾಹನ, 3 ತಲವಾರು, 1 ಚಾಕು, 4 ಮೊಬೈಲ್, 1 ವೈಫೈ ಸೆಟ್ಗಳನ್ನು ಸ್ವಾಧೀನಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮೂಡಬಿದ್ರೆ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದ ವೇಳೆ ಆರೋಪಿಗಳು ಸಾಕಷ್ಟು ಮಂದಿ ಕೇರಳದ ಕಾಸರಗೋಡು ಹಾಗೂ ಮಂಜೇಶ್ವರದವರೆಂದು ತನಿಖೆಯಿಂದ ತಿಳಿದು ಬಂದಿತ್ತು. ತನಿಖೆ ನಡೆಸುತ್ತಿದ್ದ ಮೂಡಬಿದ್ರೆ ಠಾಣಾ ಪಿಎಸ್ಐ ಸುದೀಮ್ ಮತ್ತು ಸಿಬ್ಬಂದಿಗೆ ಅಂಧ್ರ ಪ್ರದೇಶದ ವಿಶಾಖಪಟ್ಟಣಂ ನ ಗ್ರಾಮವೊಂದರಿಂದ ಮಂಗಳೂರು ಹಾಗೂ ಕಾಸರಗೋಡು ಭಾಗಕ್ಕೆ ಗಾಂಜಾ ಸರಬರಾಜು ಮಾಹಿತಿ ದೊರಕಿತ್ತು.
ಅದರಂತೆ ಮಾಹಿತಿಯನ್ನು ಕಲೆ ಹಾಕುತ್ತಿದ್ದ ತಂಡಕ್ಕೆ ಈ ಗಾಂಜಾವನ್ನು ಹಾಸನ ಭಾಗದಿಂದ ಮಂಗಳೂರಿಗೆ ತರಲಾಗುತ್ತಿದೆ ಎಂಬ ಮಾಹಿತಿಯೂ ದೊರಕಿತ್ತು ಇದರಂತೆ ಪ್ರಕರಣದ ಬೆನ್ನು ಹತ್ತಿದ ಮೂಡಬಿದ್ರೆ ಠಾಣಾ ಪೊಲೀಸರಿಗೆ ನಗರದ ಹೊರವಲಯದ ಉಳ್ಳಾಲ ಠಾಣಾ ವ್ಯಾಪ್ತಿಯ ಕೆಸಿರೋಡ್ ಸಮೀಪದ ಒಲವಿನಹಳ್ಳಿ ಕ್ರಾಸ್ ಬಳಿ ತಪಾಸಣೆಯ ಸಂದರ್ಭ ಮೀನು ಸಾಗಾಟದ ಲಾರಿ ಹಾಗೂ ಕಾರೊಂದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಎಸಿಪಿ ರಂಜಿತ್ ಹಾಗೂ ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ವಾಹನ ಪರಿಶೀಲಿಸಿದಾಗ 200 ಕೆಜಿಯಷ್ಟು ಗಾಂಜಾ ಪತ್ತೆಯಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.