2:37 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ; ಆದ್ರೂ ಯಾಕಿಂಗಾಯ್ತು?: ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸಿದ ಸಿಎಂ

10/01/2025, 21:21

*ಮೈಸೂರು ನಗರಪಾಲಿಕೆ, ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಮುಖ್ಯಮಂತ್ರಿ ಸೂಚನೆ*

*ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಲು ನಿರ್ಧರಿಸಿದ ಸಿಎಂ*

ಬೆಂಗಳೂರು(reporterkarnataka.com): 20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ. ಆದ್ರೂ ಯಾಕಿಂಗಾಯ್ತು. ಇಷ್ಟೆಲ್ಲಾ ಅವ್ಯವಸ್ಥೆ ಯಾಕಾಯ್ತು ಎಂದು ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಮೈಸೂರು ಅಭಿವೃದ್ಧಿ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳ ಜೊತೆ ನಡೆದ ಸಭೆಯಲ್ಲಿ ಮೇಲಿನಂತೆ ಪ್ರಶ್ನಿಸಿದರು.
ಮೈಸೂರಿನ‌ ಖಾಸಗಿ ಬಡಾವಣೆಗಳಲ್ಲಿನ ಮೂಲಭೂತ ಸವಲತ್ತುಗಳ ಕೊರತೆ, ಕಳಪೆ ನಿರ್ವಹಣೆ, ನೀರು-ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವ ಬಗ್ಗೆ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅಲ್ರೀ ಎಲ್ಲಾ ಪಕ್ಷದ ಶಾಸಕರು ನೀವುಗಳೇ ಸುಮಾರು 20 ವರ್ಷಗಳಿಂದ ಮುಡಾ ಸದಸ್ಯರಿದ್ದೀರಿ. ನೀವುಗಳು ಸದಸ್ಯರಾಗಿದ್ದೂ ಯಾಕಿಂಗಾಯ್ತು? ಯಾಕೆ ಅವ್ಯವಸ್ಥೆ ಆಗಲು ಬಿಟ್ಟಿದ್ದೀರಿ ಎಂದು ಮುಖ್ಯಮಂತ್ರಿಗಳು ಕೇಳಿದರು.
ಹೊಸ ಬಡಾವಣೆ ಮಾಡುವಾಗ ವಿದ್ಯುತ್‌ ಸಂಪರ್ಕ, ರಸ್ತೆ, ಒಳಚರಂಡಿ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುವುದು ಬಡಾವಣೆ ಅಭಿವೃದ್ಧಿ ಮಾಡುವವರ ಜವಾಬ್ದಾರಿ. ಬಳಿಕ ಅದನ್ನು ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇಂತಹ ಸುಮಾರು 950 ಬಡಾವಣೆಗಳನ್ನು ಹಸ್ತಾಂತರಿಸದೇ ಇರುವುದರಿಂದ ಸಮಸ್ಯೆ ಮುಂದುವರೆದಿದೆ ಎಂದು‌ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬಳಿಕ ನಗರಪಾಲಿಕೆ, ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತವಾಗಿ ಆಗದೆ ಕುಂಟುತ್ತಿರುವ ಬಗ್ಗೆ ಕೇಂದ್ರದ ಮತ್ತು ರಾಜ್ಯದ ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕೇಂದ್ರದ ಸಚಿವರಿಗೆ ವಿವರವಾದ ಪತ್ರ ಬರೆಯಲು ಮತ್ತು ಅನುಷ್ಠಾನ ಕುರಿತು ಕೇಂದ್ರ ವಿಮಾನಯಾನ ಸಚಿವರನ್ನು ಜ 15ರಂದು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಮೈಸೂರು ಜಿಲ್ಲಾಭಿವೃದ್ಧಿ ಕುರಿತಾದ ಸಭೆಯ ಇತರೆ ಮುಖ್ಯಾಂಶಗಳು:

•ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಲಿದೆ.ಯೋಜನೆಯಡಿ ಇನ್ನೂ 46 ಎಕ್ರೆ ಭೂಸ್ವಾಧೀನ ಆಗಬೇಕಿದೆ. ಈಗಾಗಲೇ 111 ಎಕ್ರೆ ಭೂಸ್ವಾಧೀನಕ್ಕೆ ಪಾವತಿ ಮಾಡಲಾಗಿದೆ. ಇನ್ನೂ 95 ಎಕ್ರೆ ಪಾವತಿ ಆಗಬೇಕಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

•ಶಿಥಿಲಗೊಂಡಿರುವ ಲಾನ್ಸ್‌ಡೌನ್‌ ಕಟ್ಟಡವನ್ನು ತೆರವುಗೊಳಿಸಿ ಅದೇ ಮಾದರಿಯಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಈ ಕುರಿತಾದ ಎಲ್ಲಾ ಕಾನೂನು ತೊಡಕುಗಳನ್ನು ಬಗೆಹರಿಸಬೇಕು.

•ಶಿಥಿಲ ಪರಿಸ್ಥಿತಿಯಲ್ಲಿರುವ ದೇವರಾಜ ಅರಸು ಮಾರುಕಟ್ಟೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

•ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಿ ಅಭಿವೃದ್ಧಿಪಡಿಸಲು ರೂ. 25 ಕೋಟಿ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದೇ ರೀತಿ ಕುಕ್ಕರಳ್ಳಿ ಕೆರೆ ಪುನಶ್ಚೇತನಕ್ಕೆ ಕ್ರಮ. ಇದಕ್ಕಾಗಿ ಕೆರೆ ಅಭಿವೃದ್ದಿ ಶುಲ್ಕ ಬಳಸಿಕೊಳ್ಳಲು ಸೂಚನೆ.

•ಮೈಸೂರು ನಗರ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿ ಒಳಚರಂಡಿ ನಿರ್ಮಾಣ, ಕೊಳಚೆ ನೀರು ಸಂಸ್ಕರಣೆ ಯೋಜನೆ ಜಾರಿಗೆ ರೂ.670 ಕೋಟಿ ಡಿಪಿಆರ್‌ ಸಿದ್ಧಪಡಿಸಲಾಗಿದ್ದು, ಅದನ್ನು ಸಂಪುಟದ ಮುಂದೆ ಮಂಡಿಸಲು ಸೂಚನೆ.

•ಅಂಬೇಡ್ಕರ್‌ ಭವನ ಕಾಮಗಾರಿಯನ್ನು ರೂ.23.83 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಲು ಸೂಚನೆ.

•ಸಾಲಿಗ್ರಾಮ ತಾಲೂಕಿನಲ್ಲಿ 50 ಕೋಟಿ ವೆಚ್ಚದಲ್ಲಿ ತಾಲೂಕು ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ. ಇದೇ ರೀತಿ ಪಿರಿಯಾಪಟ್ಟಣದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ.

•ಮೈಸೂರು ನಗರದಲ್ಲಿ 46 ಕಿಮೀ ವ್ಯಾಪ್ತಿಯಲ್ಲಿ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲಾಗಿದೆ.

.ಐಟಿ ಪಾರ್ಕ್‌ ಸ್ಥಾಪನೆಗೆ ಕೋಚನಹಳ್ಳಿಯಲ್ಲಿ ಜಮೀನು ನೀಡುವ ಕುರಿತು ಕ್ರಮ. ಕೋಚನಹಳ್ಳಿಯಲ್ಲಿ ಕೆಐಎಡಿಬಿಗೆ 404 ಎಕ್ರೆ ಜಮೀನು ಸ್ವಾಧೀನ ಕುರಿತಾಗಿ ಈಗಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.

•ಫಿಲ್ಮ್‌ ಸಿಟಿ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗನೆ ಆರಂಭಿಸಲು ಕ್ರಮ ಕೈಗೊಳ್ಳಬೇಕು.

•ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ರೂ.13 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು