ಇತ್ತೀಚಿನ ಸುದ್ದಿ
124 ಮಂದಿಯ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೇವಲ 6 ಮಂದಿ ಮಹಿಳೆಯರು!: ಇವರಲ್ಲಿ ಐವರು ಹಾಲಿ ಶಾಸಕಿಯರು!!
25/03/2023, 20:53
ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಕಟಿಸಿದ 124 ಮಂದಿ ಅಭ್ಯರ್ಥಿ ಪಟ್ಟಿಯಲ್ಲಿ ಕೇವಲ 6 ಮಂದಿ ಮಹಿಳೆಯರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಇದು ಕಾಂಗ್ರೆಸ್ ನ ಮಾತ್ರ ಕಥೆಯಲ್ಲ, ಬಿಜೆಪಿ ಮತ್ತು ಜಾತ್ಯತೀತ ಜನತಾ ದಳ ಕೂಡ ಮಹಿಳೆಯರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿವೆ.
ಕಾಂಗ್ರೆಸ್ ಪ್ರಕಟಿಸಿದ ಮೊದಲ ಯಾದಿಯಲ್ಲಿ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಹಾಗೂ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಸೇರಿದಂತೆ 6 ಮಂದಿ ಅವಕಾಶ ಪಡೆದಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಸೋಲು ಅನುಭವಿಸದ ಕುಸುಮಾ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಉಳಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಖಾನಾಪುರದಿಂದ ಡಾ. ಅಂಜಲಿ ನಿಂಬಾಳ್ಕರ್, ಕಲಬುರಗಿ ಉತ್ತರದಿಂದ ಕನೀರಂ ಫಾತಿಮಾ, ಕೆಜಿಎಫ್ ನಿಂದ ರೂಪಕಲಾ ಶಶಿಧರ್,ಬೆಂಗಳೂರಿನ ಜಯನಗರದಿಂದ ಸೌಮ್ಯಾ ರೆಡ್ಡಿ
ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಉಳಿದ 100 ಸ್ಥಾನಗಳಲ್ಲಿ ಎಷ್ಟು ಮಂದಿ ಮಹಿಳೆಯರಿಗೆ ಕೆಪಿಸಿಸಿ ಟಿಕೆಟ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.














