ಇತ್ತೀಚಿನ ಸುದ್ದಿ
12 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿ: ನಿರ್ದೇಶಕ ಶ್ರೀನಿವಾಸ ರಾವ್ ಒತ್ತಾಯ
15/03/2023, 11:50
ಮಂಗಳೂರು(reporterkarnataka.com): ಎನ್‍ಎಂಪಿಟಿಯಿಂದ 9 ಎಕರೆ ಹಾಗೂ ಕೆಐಎಡಿಬಿ ಜಮೀನು 3 ಎಕರೆ ಸೇರಿ 12 ಎಕರೆ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಟ್ರಕ್ ಟರ್ಮಿನಲ್ ನಿರ್ಮಿಸಲು ಟರ್ಮಿನಲ್ ಆಡಳಿತ ನಿರ್ದೇಶಕರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿರ್ದೇಶಕ ಶ್ರೀನಿವಾಸ್ ರಾವ್ ಹೇಳಿದರು.
ದ.ಕ ಲಾರಿ ಮಾಲಕರ ಸಂಘದ ಕೂಳೂರು ಕಚೇರಿಗೆ ಆಗಮಿಸಿದ ಸಂದರ್ಭ ದ.ಕ ಟ್ರಕ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಡಿಸೋಜ ನೇತೃತ್ವದಲ್ಲಿ ನೀಡಲಾದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.


ಟ್ರಕ್‍ಗಳು ದೇಶದಲ್ಲಿ ಸರಕು ಪೂರೈಕೆಯಲ್ಲಿ ಜೀವನಾಡಿಯಂತಿದ್ದು, ಸ್ವಲ್ಪ ವ್ಯತ್ಯಾಸವಾದರೂ ಯಾವುದೇ ವಸ್ತುಗಳು ಜನರಿಗೆ ಕ್ಲಪ್ತ ಸಮಯದಲ್ಲಿ ಸಿಗದಂತಹ ಸ್ಥಿತಿ ನಿರ್ಮಾಣವಾಗಬಹುದು. ಈ ನಿಟ್ಟಿನಲ್ಲಿ ಹಗಲು ರಾತ್ರಿ ದುಡಿಯುವ ಲಾರಿ ಚಾಲಕರಿಗೆ ಸೌಲಭ್ಯಗಳಾದ ವಿಶ್ರಾಂತಿ ಗೃಹ, ಶೌಚಾಲಯ, ಕ್ಯಾಂಟೀನ್, ಸಣ್ಣಪುಟ್ಟ ದುರಸ್ತಿ ಸ್ಥಳ ಹೀಗೆ ಎಲ್ಲವೂ ದೊರಕಬೇಕಿದೆ. ರಸ್ತೆ ಬದಿ ನಿಲ್ಲಿಸಿದಾಗ ಅಪಘಾತ, ಜೀವ ಹಾನಿ, ಸರಕು ಕಳ್ಳತನ ಎಲ್ಲವನ್ನೂ ತಡೆಯಲು ಸಾಧ್ಯವಾಗುತ್ತದೆ ಎಂದರು.
ಮಂಗಳೂರು ಬೆಂಗಳೂರು ನಡುವೆ ಸುಸಜ್ಜಿತ ರಸ್ತೆ ನಿರ್ಮಾಣದ ಬೆಡಿಕೆಯಿದೆ. ಈಗಾಗಲೇ ರಾಜ್ಯಸಭೆ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮುಖ್ಯಮಂತ್ರಿಯವರಿಗೆ ಪತ್ರಬರೆದು ಸುಗಮ ಸಂಚಾರಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಂಪರ್ಕ ಜಾಲ ನಿರ್ಮಿಸುವಲ್ಲಿ ಮುತುವರ್ಜಿ ವಹಿಸಿದ್ದು, ಕರಾವಳಿ,ಚೆನ್ನೈ ಬಂದರು ಸಂಪರ್ಕ ರಸ್ತೆಯೂ ಉತ್ತಮವಾಗಲಿದೆ ಎನ್ನುವ ವಿಶ್ವಾಸವಿದೆ ಎಂದರು.
ಅವಧಿ ಮುಗಿದ ಹಲವು ಟೋಲ್ ಕೇಂದ್ರಗಳು ಈಗಲೂ ಕಾರ್ಯಾಚರಿಸುತ್ತಿದ್ದು, ಟ್ರಕ್ ಮಾಲಕರಿಗೆ ಹೊರೆಯಾಗಿದೆ. ಎಲ್ಲಡೆ ಇಂತಹ ಟೋಲ್‍ಗಳ ಸ್ಥಗಿತ ಹಾಗೂ ಹೊಸ ಟೋಲ್ ವ್ಯವಸ್ಥೆಗಳಲ್ಲಿ ಮಿತವ್ಯಯದರದ ಟೋಲ್ ಇರಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಹೆಳಿದರು.
ದ.ಕ ಲಾರಿ ಮಾಲಕರ ಸಂಘದ ಆಧ್ಯಕ್ಷ ಸುನಿಲ್ ಡಿಸೋಜ, ಸಲಹೆಗಾರ ನ್ಯಾಯವಾದಿ ಬಿ.ಎಸ್. ಚಂದ್ರು, ವೀರೇಂದ್ರ ವಿ.,ಸುಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.














