ಇತ್ತೀಚಿನ ಸುದ್ದಿ
10 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಶೀಘ್ರದಲ್ಲೇ ಕ್ರಮ: ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
28/09/2021, 21:11
ಚಿಕ್ಕಬಳ್ಳಾಪುರ(reporterkarnataka news): ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಅನೇಕ ಜಾತಿಗಳು ಹಿಂದುಳಿದ ಜಾತಿ ವರ್ಗಗಳ ಸ್ಥಾನಮಾನ ಕೋರಿ ಮನವಿ ಸಲ್ಲಿಸಿದ್ದು, ಈ ಪೈಕಿ ಬಹಿರಂಗವಾಗಿ ವಿಚಾರಣೆ ನಡೆಸಿ ಮತ್ತು ಆಕ್ಷೇಪಣೆ, ಸಲಹೆ, ಅಭಿಪ್ರಾಯಗಳನ್ನು ಸ್ವೀಕರಿಸಿ ಅಂತಿಮವಾಗಿ 10 ಜಾತಿಗಳನ್ನು ಹಿಂದುಳಿದ ಜಾತಿ ವರ್ಗಗಳ ಪಟ್ಟಿಯಲ್ಲಿ ಸ್ಥಾನಮಾನ ನೀಡಲು ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ಹಿಂದುಳಿದ ವರ್ಗಗಳ ಆಯೋಗದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ಕೋರಿ ಅನೇಕ ಹಿಂದುಳಿದ ಜಾತಿಗಳು ಆಯೋಗಕ್ಕೆ ಮನವಿ ಸಲ್ಲಿಸಿವೆ. ಈ ರೀತಿಯ ಮನವಿಗಳನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಿ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ, ಅಭಿಪ್ರಾಯಗಳನ್ನು ಸ್ವೀಕರಿಸಿ ಅದರ ಆಧಾರದ ಮೇಲೆ ಅಂತಿಮವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ್ದ ಅನೇಕ ಜಾತಿಗಳ ಪೈಕಿ 10 ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಆಯೋಗ ಶಿಫಾರಾಸು ಮಾಡಲಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸರ್ಕಾರಕ್ಕೆ ಪತ್ರವನ್ನು ಆಯೋಗ ಕಳುಹಿಸಿಕೊಡಲಿದೆ ಎಂದರು.
ಇನ್ನೂ 15 ಜಾತಿಗಳನ್ನು ಸೇರ್ಪಡೆಗೊಳಿಸುವ ಕ್ರಮವು ವಿಚಾರಣಾ ಹಂತದಲ್ಲಿದ್ದು, ಅಕ್ಟೋಬರ್ 11 ಮತ್ತು 12 ರಂದು ಆಯೋಗ ಸಾರ್ವಜನಿಕವಾಗಿ ಸಭೆ ನಡೆಸಿ ಆಕ್ಷೇಪಣೆ, ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲಾಗುವುದು. ಒಟ್ಟಾರೆಯಾಗಿ ರಾಜ್ಯದ ಹಿಂದುಳಿದ ಜಾತಿ ವರ್ಗಗಳ ಅಭಿವೃದ್ಧಿ ಮತ್ತು ಹಿತಾಸಕ್ತಿಗೆ ಪೂರಕವಾಗಿ ಆಯೋಗ ತನ್ನ ಕೆಲಸವನ್ನು ಆಯೋಗ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಮಾಡಲಿದೆ ಎಂದು ಇದೇ ವೇಳೆ ತಿಳಿಸಿದರು.
ಜಾತಿ ಪಟ್ಟಿಯಲ್ಲಿ ಇಲ್ಲದ ಹಿಂದುಳಿದ ವರ್ಗದವರು ಇದ್ದರೆ ಜಾತಿ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸಲು ನಾಗರಿಕರಲ್ಲಿ ಮನವಿ ಮಾಡಿದರು ಅಲ್ಲದೇ ಜಾತಿ ಪಟ್ಟಿಯಲ್ಲಿ ಇಲ್ಲದ ಹಿಂದುಳಿದ ವರ್ಗದವರು ಅಥವಾ ಜನಾಂಗದವರು ತಾವು ಕರ್ತವ್ಯ ನಿರ್ವಹಿಸುವ ವ್ಯಾಪ್ತಿಯಲ್ಲಿ ತಮ್ಮ ಗಮನಕ್ಕೆ ಕಂಡುಬಂದಿದ್ದರೆ ಕೂಡಲೇ ಆಯೋಗಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ವರದಿ ಸಲ್ಲಿಸಲು ಕ್ರಮವಹಿಸುವಂತೆ ತಹಶೀಲ್ದಾರ್ ರವರಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತದ ಕ್ರಮಕ್ಕೆ ಮೆಚ್ಚುಗೆ: ಪತ್ರಿಕಾಗೋಷ್ಠಿಗೂ ಮುನ್ನ ಆಯೋಗದ ಅಧ್ಯಕ್ಷರು ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಡಾ.ಅಶೋಕ್ ರವರಿಂದ ಮಾಹಿತಿ ಪಡೆದು ಮಾತನಾಡುತ್ತಾ, ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಒಂದು ತಂಡದ ರೀತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಶೇ.100 ರಷ್ಟು ಅನುಷ್ಠಾನಗೊಳಿಸಿರುವುದು ಗಮನಾರ್ಹ ಎಂದರು. ಅಲ್ಲದೇ ಅಧಿಕಾರಿಗಳು ನೀಡಿರುವ ಎಲ್ಲಾ ಮಾಹಿತಿಯನ್ನು ಇಂದು ಮತ್ತು ನಾಳೆ ಜಿಲ್ಲೆಯಾದ್ಯಂತ ಖುದ್ದು ಆಯೋಗದ ಸದಸ್ಯರೊಂದಿಗೆ ಕ್ಷೇತ್ರ ವೀಕ್ಷಣೆ ಮಾಡಿ, ಪರಿಶೀಲನೆ ಮಾಡಲಾಗುವುದು ಎಂದು ಈ ವೇಳೆ ಸ್ಪಷ್ಟ ಪಡಿಸಿದರು.
ಸಭೆಯಲ್ಲಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ರಾಜಶೇಖರ್, ಕೆ.ಟಿ.ಸುವರ್ಣ ಮತ್ತು ಅರುಣ್ ಕುಮಾರ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.