ಇತ್ತೀಚಿನ ಸುದ್ದಿ
ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್ ವಜಾ
19/09/2025, 18:15

ನವದೆಹಲಿ(reporterkarnataka.com): ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸದ ವಿರುದ್ದ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾದ ಆರ್ಜಿಯನ್ನು ವಜಾಗೊಳಿಸಲಾಗಿದೆ.
ಮೈಸೂರು ದಸರಾ ಉದ್ಘಾಟಿಸಲು ಬಾನು ಮುಷ್ತಾಕ್ಗೆ ಅನುಮತಿ ನೀಡುವ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ವಿಶ್ವವಿಖ್ಯಾತ ಮೈಸೂರು ದಸರಾ 2025 ಮಹೋತ್ಸವದ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾ.ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.
ಯಾವುದೇ ಒಂದು ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವ ವ್ಯಕ್ತಿ ಇತರೆ ಧರ್ಮದ ಹಬ್ಬಗಳಲ್ಲಿ ಆಚರಣೆಯಲ್ಲಿ ಭಾಗಿಯಾಗುವುದರಿಂದ ಸಂವಿಧಾನದಡಿ ಲಭ್ಯವಿರುವ ಯಾವುದೇ ಹಕ್ಕುಗಳು ಉಲ್ಲಂಘನೆಯಾಗುವುದಿಲ್ಲ ಎಂದು ಕೋರ್ಟ್ ವಿಶ್ಲೇಷಣೆ ಮಾಡಿದೆ.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಚ್.ಎಸ್.ಗೌರವ್ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ಸಲ್ಲಿಸಿರುವ ಉದ್ದೇಶವೇನು ಎಂದು ಪೀಠ ಅರ್ಜಿದಾರರ ವಕೀಲರನ್ನು ಕೇಳಿತು. ಇದಕ್ಕೆ ವಕೀಲರು, ದೇವಸ್ಥಾನಗಳ ಒಳಭಾಗದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಜಾತ್ಯತೀತವಲ್ಲ. ಆದರೆ, ಅದು ದಸರಾ ಆಚರಣೆಯ ಒಂದು ಭಾಗ. ಧಾರ್ಮಿಕ ಚಟುವಟಿಕೆಗಳಿಗೆ ಮತ್ತೊಂದು ಧರ್ಮದವರನ್ನು ದೇವಾಲಯಕ್ಕೆ ಕರೆತರಲು ಸಾಧ್ಯವಿಲ್ಲ. ಇದನ್ನು ರಾಜಕೀಯ ಕಾರಣಕ್ಕಾಗಿ ಮಾಡಲಾಗುತ್ತಿದೆ. ಅಲ್ಲದೆ, ಬಾನು ಮುಷ್ತಾಕ್ ಅವರು ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ. ಅಂತಹ ವ್ಯಕ್ತಿಯನ್ನು ಹಿಂದೂ ಧಾರ್ಮಿಕ ಕಾರ್ಯಗಳಲ್ಲಿ ಆಹ್ವಾನಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.
ಅರ್ಜಿಯಲ್ಲಿ ದಸರಾ ಉದ್ಘಾಟನೆ ಸಂಪ್ರದಾಯಗಳಿಂದ ನಿಯಂತ್ರಿಸುವ ಹಿಂದೂ ಪೂಜೆಯ ಕ್ರಿಯೆಗಳಾಗಿದ್ದು, ಹಿಂದೂಯೇತರರು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿತ್ತು. ಉದ್ಘಾಟನೆಯಲ್ಲಿ ದೀಪ ಬೆಳಗಿಸುವುದು, ಚಾಮುಂಡೇಶ್ವರಿ ದೇವಿಗೆ ಅರಿಶಿಣ, ಕುಂಕುಮ, ಹೂವು ಮತ್ತು ಹಣ್ಣನ್ನು ನೀಡುವುದು ಒಳಗೊಂಡಿದೆ ಎಂದು ತಿಳಿಸಲಾಗಿದೆ.
ಈ ವಾದ ಆಲಿಸಿದ ನ್ಯಾಯಪೀಠ, ಸಂವಿಧಾನದ ಪೀಠಿಕೆಯನ್ನು ಒಮ್ಮೆ ಓದಿ ನೋಡಿ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯುವ ದಸರಾ ಉದ್ಘಾಟನೆಯ ಆಚರಣೆಗಳು ಕೇವಲ ಸಾಂಕೇತಿಕವಲ್ಲ, ಬದಲಾಗಿ ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ರಕ್ಷಿಸಲ್ಪಟ್ಟ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಧಾರ್ಮಿಕ ಚಟುವಟಿಕೆಗಳಿಗೆ ಅದು ಅಡ್ಡಿಯಾಗಬಾರದು ಎಂದು ಅದು ಹೇಳುತ್ತದೆ. ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಉಲ್ಲಂಘನೆಯಾಗಿದೆ ಎಂಬುದು ಇಲ್ಲಿ ಕಂಡುಬಂದಿಲ್ಲ. ಅದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಪೀಠ ತಿಳಿಸಿತು.
ವಿವಾದ: ಈ ಬಾರಿಯ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಹ್ವಾನ ನೀಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಮತ್ತಿತರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ಅರ್ಜಿಯಲ್ಲಿ ಅರ್ಜಿದಾರರ ಯಾವುದೇ ಕಾನೂನು ಮತ್ತು ಸಾಂವಿಧಾನಿಕ ಹಕ್ಕುಗಳು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು.