ಇತ್ತೀಚಿನ ಸುದ್ದಿ
ಕೆ.ಟಿ.ಗಟ್ಟಿ ಅವರ ಕಾದಂಬರಿಗಳಲ್ಲಿ ತಮ್ಮ ಬಿಂಬವನ್ನೇ ಕಾಣುತ್ತಿದ್ದ ಓದುಗರು: ಪ್ರೊ. ಬಿ.ಶಿವರಾಮ ಶೆಟ್ಟಿ
26/02/2024, 15:28
ಮಂಗಳೂರು(reporterkarnataka.com): ಕೆ.ಟಿ.ಗಟ್ಟಿ ಅವರ ಕಾದಂಬರಿಗಳ ಪಾತ್ರಗಳಲ್ಲಿ ಓದುಗರು ತಮ್ಮ ಬಿಂಬವನ್ನೇ ಕಾಣುತ್ತಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ ಹೇಳಿದರು.
ಒಂದು ಕಾಲಘಟ್ಟದಲ್ಲಿ ಶಿವರಾಮ ಕಾರಂತ ಹಾಗೂ ಎಸ್.ಎಲ್.ಬೈರಪ್ಪ ಅವರಿಗಿಂತಲೂ ದೊಡ್ಡ ಓದುಗ ವರ್ಗವನ್ನು ಹೊಂದಿದ್ದ ಕಾದಂಬರಿಕಾರ ಅವರಾಗಿದ್ದರು ಎಂದು ಅವರು ಹೇಳಿದರು.
ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ ಕೆ.ಟಿ.ಗಟ್ಟಿ ಅವರಿಗೆ ತುಳು ಪರಿಷತ್ ವತಿಯಿಂದ ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ಆಯೋಜಿಸಲಾದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮ್ಮ ಕಾದಂಬರಿಗಳಲ್ಲಿ ಬಡತನ, ನೋವು ,ಸಂಕಟ ಹಾಗೂ ಬದುಕಿನ ಸಂಬಂಧಗಳ ಚಿತ್ರಣದೊಂದಿಗೆ ಅವರು ಕಟ್ಟಿಕೊಟ್ಟ ಭಾವ ಪ್ರಪಂಚ ಜನರನ್ನು ಆಕರ್ಷಸಿತ್ತು ಎಂದು ಪ್ರೊ. ಶಿವರಾಮ ಶೆಟ್ಟಿ ಅಭಿಪ್ರಾಯ ಪಟ್ಟರು.
ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಅವರು ಮಾತನಾಡಿ,ಗಟ್ಟಿ ಅವರ ಬದುಕು ಬಾಲ್ಯದ ಕಹಿ ಘಟನೆಗಳು, ಜಾತಿಯ ಕಾರಣಕ್ಕೆ ಎದುರಿಸಿದ ಅವಮಾನಗಳಿಂದ ಮಾಗಿತ್ತು , ಹಾಗಾಗಿಯೇ ಅವರ ಬರಹಗಳಲ್ಲಿ ಬಡ ಮಧ್ಯಮ ವರ್ಗದ ಜನರ ಬವಣೆ, ಹೆಣ್ಣಿನ ಶೋಷಣೆಗಳನ್ನು ಬಿಂಬಿಸಿದ್ದಾರೆ, ವೈಚಾರಿಕತೆಯ ಮಹತ್ವವನ್ನು ಸಾರಿದ್ದಾರೆ ಎಂದು ಹೇಳಿದರು.
ಕೆ.ಟಿ.ಗಟ್ಟಿ ಅವರ ಪುತ್ರ ಸತ್ಯಜಿತ್ ಅವರು ಮಾತನಾಡಿ, ಅಪ್ಪನ ಅಗಾಧ ಪ್ರಭಾವ ನನ್ನ ಮೇಲೂ ಆಗಿದೆ, ಅಪ್ಪ ಕೈ ತುಂಬ ಸಂಬಳ ಬರುತ್ತಿದ್ದ ನೌಕರಿಯನ್ನು ತೊರೆದು ಸಾಹಿತ್ಯ ಬರೆದೇ ಬದುಕುತ್ತೇನೆ ಎಂಬುದನ್ನು ಆಯ್ಕೆ ಮಾಡಲು ಅವರಿಗೆ ಹೇಗೆ ಧೈರ್ಯಬಂತು ಹಾಗೂ ಹೇಗೆ ಅಷ್ಟು ನಿರಾಳರಾಗಿ ಬರೆದರು ಎಂಬ ಪ್ರಶ್ನೆ ಈಗಲೂ ಕಾಡುತ್ತದೆ ಎಂದರು.
ಉಪನ್ಯಾಸಕ ಚೇತನ್ ಸೋಮೇಶ್ವರ ಅವರು ಮಾತನಾಡಿ, ಬಡವರಿಗಾಗಿ ದುಡಿದ, ಸ್ವಾಭಿಮಾನಕ್ಕಾಗಿ ತುಡಿದ ಕೆ.ಟಿ.ಗಟ್ಟಿ ಅವರ ಹಾಗೂ ನನ್ನ ತಂದೆ ಅಮೃತ ಸೋಮೇಶ್ವರ ಅವರ ಸಾಹಿತ್ಯಕ್ಕೆ ನ್ಯಾಯ ಒದಗಿಸುವಂತಹ ವಿಮರ್ಶೆ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತಾ ಗಟ್ಟಿ ಅವರು ಮಾತನಾಡಿ, ಹಿಂದುಳಿದ ಸಣ್ಣ ಸಮುದಾಯವಾದ ಗಟ್ಟಿ ಸಮಾಜವು ರಾಜ್ಯದಾದ್ಯಂತ ಕೆ.ಟಿ.ಗಟ್ಟಿ ಅವರಿಂದಾಗಿ ಗುರುತಿಸಿಕೊಳ್ಳುವಂತಾಯಿತು, ಈ ಬಗ್ಗೆ ಗಟ್ಟಿ ಸಮಾಜಕ್ಕೆ ಅವರ ಬಗ್ಗೆ ವಿಶೇಷ ಅಭಿಮಾನ ಇದೆ ಅಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆ, ಪತ್ರಕರ್ತ ನಂದಗೋಪಾಲ್, ಲೇಖಕಿಯರಾದ ಉಷಾ ಪಿ ರೈ, ಡಾ.ಮೀನಾಕ್ಷಿ ರಾಮಚಂದ್ರ, ಮೀನಾಕ್ಷಿ ಕಳವಾರು, ಉಪನ್ಯಾಸಕ ಡಾ.ಮಾಧವ ಎಂ.ಕೆ ಮೊದಲಾದವರು ನುಡಿ ನಮನ ಸಲ್ಲಿಸಿದರು.
ಕೆ.ಟಿ.ಗಟ್ಟಿ ಅವರ ಪತ್ನಿ ಯಶೋಧ, ಪುತ್ರಿಯರಾದ ಚಿತ್ ಪ್ರಭಾ, ಪ್ರಿಯದರ್ಶಿನಿ ಪಾಲ್ಗೊಂಡಿದ್ದರು. ಡಾ.ಪ್ರಭಾಕರ ನೀರ್ ಮಾರ್ಗ, ಬೆನೆಟ್ ಅಮ್ಮನ್ನ, ಸದಾಶಿವ ಮಾಸ್ಟ್ರು, ಗಣೇಶ್ ಪೂಜಾರಿ, ಶಾಂತಲಾ ಗಟ್ಟಿ, ಶಾಲೆಟ್ ಪಿಂಟೋ, ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಮಹಹ್ಮದ್ ಹನೀಫ್ , ವೆಂಕಟೇಶ್ ಬಾಳಿಗ, ಶುಭೋದಯ ಆಳ್ವಾ ಮೊದಲಾದವರು ಭಾಗವಹಿಸಿದ್ದರು. ತುಳು ಪರಿಷತ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.