ಇತ್ತೀಚಿನ ಸುದ್ದಿ
ವರದಕ್ಷಿಣೆ ಕಿರುಕುಳ : ಕೋಡಿಜಾಲ್ ಇಬ್ರಾಹಿಂ ಸಿರಾಜ್ ಸಹಿತ ನಾಲ್ವರ ವಿರುದ್ಧ ಕೇಸು
September 17, 2020, 8:53 PM

ಮಂಗಳೂರು ( reporter Karnataka news)
ನೂರು ಪವನ್ ಚಿನ್ನ ತರುವಂತೆ ಒತ್ತಾಯಿಸಿದ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಣಾಜೆ ಕೋಡಿಜಾಲ್ ನಿವಾಸಿಗಳಾದ ಇಬ್ರಾಹಿಂ ಸಿರಾಜ್, ನಫೀಸಾ, ಮುಮ್ತಾಜ್ ಮತ್ತು ಸಂಶುದ್ಧೀನ್ ಎಂಬವರ ವಿರುದ್ಧ ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ಕೊಲೆ ಯತ್ನ ಕಲಂ ಪ್ರಕಾರ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರದ ರಜಿಯಾ ಬಾನು ಎಂಬವರು ನೀಡಿದ ದೂರಿನ ಪ್ರಕಾರ ಆಕೆಯ ಪತಿ ಕೋಡಿಜಾಲ್ ಇಬ್ರಾಹಿಂ ಸಿರಾಜ್ ಮತ್ತವರ ಸಂಬಂಧಿಕರ ವಿರುದ್ಧ ರಜಿಯಾ ಬಾನು ಅವರಿಗೆ ಇಲೆಕ್ಟ್ರಿಕ್ ಶಾಕ್ ನೀಡಿ ಕೊಲೆ ಮಾಡುವ ಯತ್ನ ಮಾಡಿದ ಮತ್ತು ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ ಪ್ರಕರಣ ದಾಖಲಿಸಲಾಗಿದೆ.

ಕೋಡಿಜಾಲ್ ಇಬ್ರಾಹಿಂ ಸಿರಾಜ್ ರಾಜಕೀಯ ಪ್ರಭಾವ ಇರುವ ವ್ಯಕ್ತಿಯಾಗಿದ್ದು, 2019ರ ಫೆ.17ರಂದು ರಜಿಯಾ ಜತೆಗೆ ವಿವಾಹವಾಗಿತ್ತು. ವಿವಾಹವು ಎಂಟು ತಿಂಗಳ ಮೊದಲೇ ನಿಶ್ಚಯವಾಗಿದ್ದು, ಮದುಮಗಳ ತಂದೆ ತನ್ನ ಅಂಗಡಿಯನ್ನು ಮಾರಾಟ ಮಾಡಿ 50 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ದುಬಾಯಿಯಲ್ಲಿ ಉದ್ಯೋಗದಲ್ಲಿದ್ದ ಇಬ್ರಾಹಿಂ ವಿವಾಹವಾದ ಅನಂತರ ಮಡದಿಯೊಂದಿಗೆ ಕೊಣಾಜೆಯಲ್ಲಿ ವಾಸಿಸುತ್ತಿದ್ದರು. ವಿವಾಹವಾದ ಕೆಲವು ತಿಂಗಳ ನಂತರ ನೂರು ಪವನ್ ಚಿನ್ನ ಕೊಡಬೇಕು ಮತ್ತು 25 ಲಕ್ಷ ರೂಪಾಯಿ ನಗದು ನೀಡಬೇಕೆಂದು ಕಿರುಕುಳ ನೀಡಲಾಗುತಿತ್ತು.

ಈ ಮಧ್ಯೆ, ಇಬ್ಬರು ಪರಸ್ಪರ ಒಂದು ಮಗುವನ್ನು ಮಾತ್ರ ಹೊಂದುವ ಉದ್ದೇಶ ಹೊಂದಿದ್ದರೂ ಆಕೆ ಗರ್ಭವತಿ ಆಗಿರಲಿಲ್ಲ. ಮಡದಿಯು ಮಂಗಳೂರು ಕರಂಗಲಪಾಡಿಯಲ್ಲಿ ಇರುವ ನಯನ ಪ್ರಭು ವೈದ್ಯರಲ್ಲಿ ತಪಾಸಣೆ ಮಾಡಿಕೊಂಡು ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ತಿಳಿದುಕೊಂಡರೂ ಪತಿ ಮಾತ್ರ ವೈದ್ಯಕೀಯ ತಪಾಸಣೆ ಮಾಡಿಕೊಳ್ಳದೆ ಮತ್ತೆ ಕೊಲ್ಲಿ ರಾಷ್ಟ್ರಕ್ಕೆ ವಾಪಾಸಾಗಿದ್ದ.
ಗಂಡನ ಮನೆಯಲ್ಲಿ ದೈಹಿಕ ಕಿರುಕುಳ ತಡೆಯಲಾರದೆ ಆಸ್ಪತ್ರೆ ಸೇರಿದ್ದ ರಜಿಯಾ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದು, ಕೇಸು ದಾಖಲಾಗಿ ಕೆಲವು ದಿನಗಳು ಕಳೆದರೂ ಪೊಲೀಸರಿಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ.
ಮಂಗಳೂರು ಪೊಲೀಸರು ವರದಕ್ಷಿಣೆ ನಿಷೇಧ ಕಾಯಿದೆಯಡಿ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.