ಇತ್ತೀಚಿನ ಸುದ್ದಿ
ಯುಗಾದಿ ಟ್ವೀಟ್ ನಲ್ಲಿ ಮಾಜಿ ಸಿಎಂ ಎಚ್ ಡಿಕೆ ಹೇಳಿದ್ದೇನು?: ಬಿಜೆಪಿಗೆ ಅವರು ಮಾಡಿದ ಪಾಠವೇನು
02/04/2022, 16:09
ಬೆಂಗಳೂರು(reporterkarnataka.com): ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ
ಅವರು ಯುಗಾದಿ ಪ್ರಯುಕ್ತ ಟ್ವೀಟ್ ಮಾಡಿದ್ದಾರೆ.
ಪ್ರಸಕ್ತ ವಿದ್ಯಮಾನಗಳ ಉಲ್ಲೇಖಿಸಿ, ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿಗೆ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಯುಗಾದಿ ಪರ್ವದಿನದಂದು ನಾವೆಲ್ಲ ಸಂಕಲ್ಪ ಮಾಡೋಣ ಎಂದು ಕೆಲವು ಸಂದೇಶವನ್ನು ಸಮಾಜಕ್ಕೆ ರವಾನೆ ಮಾಡುವ ಮೂಲಕವಾಗಿ ಹಬ್ಬ ಶುಭಾಶಯ ಕೋರಿದ್ದಾರೆ.
ಎಚ್ ಡಿಕೆ ಟ್ವೀಟ್‍ನಲ್ಲಿ ಏನಿದೆ?: ಯುಗಾದಿ ಪರ್ವದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ.
ಕುರ್ಚಿ ಹಿಡಿಯಲು ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ಹಿಂದುತ್ವದ ವಿನಾಶ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ.
ತಲೆತಲಾಂತರಗಳಿಂದ ಯುಗಾದಿ ಇದೆ. ವರ್ಷತೊಡಕೂ ಇದೆ, ಹಲಾಲೂ ಇದೆ. ಹಲಾಲ್ ಹಾಲಾಹಲವನ್ನು ಈಗ ಸೃಷ್ಟಿಸಲಾಗಿದೆ. ಹಲಾಲು, ಜಟ್ಕಾ ಎಂದು ಜನರನ್ನು ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದು ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲ ತಲೆತಲಾಂತರಗಳಿಂದ ಇಲ್ಲದ ಆಹಾರ ತಾರತಮ್ಯ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ರೋಡ್ ಮ್ಯಾಪ್ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ ಅಂದರೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ.