ಇತ್ತೀಚಿನ ಸುದ್ದಿ
ಯಾವುದೇ ಕಾರಣಕ್ಕೂ ವಿಳಂಬ ಇಲ್ಲ, ಶೀಘ್ರದಲ್ಲೇ ಲೋಕಾಯುಕ್ತರ ನೇಮಕ: ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ
08/06/2022, 17:42
ಮೈಸೂರು(reporterkarnataka.com):
ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲೇ
ಲೋಕಾಯುಕ್ತ ಸಂಸ್ಥೆಗೆ ಲೋಕಾಯುಕ್ತರನ್ನು ನೇಮಕ ಮಾಡಲಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಬುಧವಾರ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಲೋಕಾಯುಕ್ತರ ನೇಮಕ ಪ್ರಗತಿಯಲ್ಲಿದೆ. ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ, ಶೀಘ್ರವಾಗಿ ನೇಮಕ ಮಾಡುತ್ತೇನೆ ಎಂದರು.
ಜೆಡಿಎಸ್- ಕಾಂಗ್ರೆಸ್ ಆಫರ್ ಬಗ್ಗೆ ನಮಗೆ ಗೊತ್ತಿಲ್ಲ.
ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ನಮ್ಮ ಪಕ್ಷದ ಮತಗಳನ್ನು ನಮ್ಮ ಅಭ್ಯರ್ಥಿಗಳಿಗೆ ಹಾಕುತ್ತೇವೆ. ಜೆಡಿಎಸ್- ಕಾಂಗ್ರೆಸ್ ನಡುವಿನ ಆಫರ್ ಬಗ್ಗೆ ನಮಗೆ ಸಂಬಂಧಿಸಿದಲ್ಲ. ಆ ವಿಚಾರದ ಬಗ್ಗೆ ನಮಗೆ ಯಾವ ಮಾಹಿತಿಯಿಲ್ಲ ಎಂದರು.
ಮೇಕೆದಾಟು ಯೋಜನೆ ನಿಲ್ಲಿಸಲು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದು ಖಂಡನೀಯವಾದದ್ದು. ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ರಚನೆಯಾಗಿದೆ. ಯಾವ ಯೋಜನೆಯನ್ನು ಜಾರಿಗೊಳಿಸಬೇಕು, ಯಾವುದನ್ನು ಜಾರಿಗೊಳಿಸಬಾರದು ಎಂದು ಹೇಳುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ಈಗಾಗಲೇ ಮೇಕೆದಾಟು ಯೋಜನೆ ವಿಚಾರವಾಗಿ ಪ್ರಾಧಿಕಾರ 16-17 ಸಭೆಗಳನ್ನು ನಡೆಸಿದೆ. ಕರ್ನಾಟಕ ತನಗೆ ಹಂಚಿಕೆ ಮಾಡಿರುವ ನದಿ ನೀರನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಹೇಳಿದೆ. ಹೀಗಿದ್ದರೂ ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ತಕರಾರು ತೆಗೆಯುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೇಕೆದಾಟು ಯೋಜನೆ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್ ನೀಡಿರುವ ನೊಟೀಸ್ಗೆ ನಾವು ಸಮರ್ಥವಾದ ಉತ್ತರವನ್ನು ನೀಡಿದ್ದೇವೆ ಎಂದರು.