ಇತ್ತೀಚಿನ ಸುದ್ದಿ
ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ?
11/08/2025, 20:23

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿಶ್ವವಿಖ್ಯಾತ ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು.
ಈ ತೂಕ ಪರೀಕ್ಷೆಯಲ್ಲಿ 25 ವರ್ಷದ ಭೀಮನೇ ಅತೀ ಹೆಚ್ಚು ತೂಕ ಹೊಂದಿರುವ ಆನೆಯಾಗಿದ್ದು, ಆನಂತರ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯು 2ನೇ ಸ್ಥಾನದಲ್ಲಿದೆ.
ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಹುಣಸೂರಿನ ವೀರನ ಹೊಸಹಳ್ಳಿ ಮೂಲಕ ಆಗಮಿಸಿರುವ ಮೊದಲ ಹಂತದ ಅಭಿಮನ್ಯು ನೇತೃತ್ವದ ಗಜಪಡೆಗೆ ನಗರದ ಧನ್ವಂತರಿ ರಸ್ತೆಯಲ್ಲಿರುವ ತೂಕ ಕೇಂದ್ರದಲ್ಲಿ ತೂಕ ಪರೀಕ್ಷೆ ನಡೆಸಲಾಯಿತು.
*9 ಆನೆಗಳ ತೂಕದ ವಿವರ:* ಅಭಿಮನ್ಯು – 5,360 ಕೆ.ಜಿ., ಧನಂಜಯ – 5,310 ಕೆ.ಜಿ., ಕಾವೇರಿ – 3,010 ಕೆ.ಜಿ., ಲಕ್ಷ್ಮಿ – 3,730 ಕೆ.ಜಿ., ಭೀಮ – 5,465 ಕೆ.ಜಿ., ಏಕಲವ್ಯ – 5,305 ಕೆ.ಜಿ., ಮಹೇಂದ್ರ – 5,120 ಕೆ.ಜಿ., ಕಂಜನ್ – 4,880 ಕೆ.ಜಿ., ಪ್ರಶಾಂತ – 5,110 ಕೆ.ಜಿ. ತೂಕ ಹೊಂದಿದ್ದಾರೆ.
“ಈ ಬಾರಿ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ 9 ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲ ಆನೆಗಳು ಆರೋಗ್ಯವಾಗಿವೆ. ಕಳೆದ ಬಾರಿ ದಸರಾದಲ್ಲಿ ಭಾಗವಹಿಸಿ ವಾಪಸ್ ಕಾಡಿಗೆ ಹೋಗುವಾಗ ಇದ್ದ ತೂಕವನ್ನೇ ಉಳಿಸಿಕೊಂಡಿರುವ ಆನೆಗಳು ಎಲ್ಲವೂ ಆರೋಗ್ಯವಾಗಿದೆ,
ಆನೆಗಳ ಆರೋಗ್ಯ ಹಾಗೂ ಜಂಬೂಸವಾರಿ ಮೆರವಣಿಗೆಗೆ ಯಾವ ರೀತಿ ಪ್ರೋಟೀನ್ಗಳು, ವಿಶೇಷ ಆಹಾರ ನೀಡಬೇಕು ಎಂಬುದನ್ನು ತಿಳಿಯಲು ಇಂದು ತೂಕ ಪರೀಕ್ಷೆ ಮಾಡಲಾಯಿತು. ಅರಣ್ಯಭವನದಲ್ಲಿ ವೈದ್ಯರ ಮೀಟಿಂಗ್ ಮಾಡಿ ಅಂತಿಮವಾಗಿ ಯಾವ ರೀತಿ ಆಹಾರ ನೀಡಬೇಕು ಎಂಬುದನ್ನು ತೀರ್ಮಾನ ಮಾಡಲಾಗುತ್ತದೆ. ಅದರಂತೆ ನಾಳೆಯಿಂದ ವಿಶೇಷ ಆಹಾರ ಜೊತೆಗೆ ತಾಲೀಮು ನಡೆಸಲಾಗುವುದು ಎಂದು ಡಿಸಿ ಎಫ್ ಪ್ರಭುಗೌಡ ತಿಳಿಸಿದ್ದಾರೆ.
ಗಜಪಡೆ ಅರಮನೆಯಲ್ಲಿ ವಾಸ್ತವ್ಯ ಹೂಡಲಿದೆ. 9 ಆನೆಗಳು ಅರಮನೆಯ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ವಾಸ್ತವ್ಯ ಹೂಡಿವೆ.
ಎರಡು ತಿಂಗಳುಗಳ ಕಾಲ ಇಲ್ಲೇ ಇರುವ ಗಜಪಡೆ ಜಂಬೂಸವಾರಿ ಮೆರವಣಿಗೆ ಮುಗಿಸಿಕೊಂಡು ಕಾಡಿಗೆ ಮರಳುತ್ತವೆ. ಈ ಮಧ್ಯೆ ಗಜಪಡೆಯನ್ನು ನಿತ್ಯ ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ತಾಲೀಮು ನಡೆಸಲಾಗುತ್ತದೆ. ಜೊತೆ ಗಜಪಡೆಗೆ ವಿಶೇಷ ಆಹಾರ ನೀಡಲಾಗುತ್ತದೆ. ಈ ಬಾರಿಯೂ ಸಹ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ.