ಇತ್ತೀಚಿನ ಸುದ್ದಿ
Water | ನಾರಾಯಣಪುರ ಕಾಲುವೆಗೆ ಏ.15ರವರೆಗೆ ನೀರು ಹರಿಸಲು ರೈತ ಸಂಘ ಮುಖಂಡರು ಒತ್ತಾಯ
02/03/2025, 16:45

ಶಿವು ರಾಠೋಡ್ ಹುಣಸಗಿ ಯಾದಗಿರಿ
info.reporterkarnataka@gmail.com
ಕರ್ನಾಟಕ ರಾಜ್ಯ ರೈತ ಸಂಘ ಹುಣಸಗಿ ತಾಲೂಕು ಘಟಕದ ಪದಾಧಿಕಾರಿಗಳು ಶನಿವಾರ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ ಕಚೇರಿಗೆ ತೆರಳಿ ಹಿಂಗಾರು ಹಂಗಾಮಿನ ಬೆಳೆಗಳಿಗೆ ಏ.15ರವರೆಗೆ
ನಾರಾಯಣಪುರ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಸಿಇ ಆರ್. ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಹನುಮಗೌಡ ನಾರಾಯಣಪುರ, ಸಂಘಟನೆ ತಾಲೂಕು ಉಪಾಧ್ಯಕ್ಷ ಗದ್ದೆಪ್ಪನಾಗಬೇನಾಳ ಮಾತನಾಡಿ, ಕೃಷ್ಣಾ ಅಚ್ಚುಕಟ್ಟು ಭಾಗದ ರೈತರು ಕಾಲುವೆ ನೀರನ್ನೇ ನಂಬಿ ವಿವಿಧ ಬೆಳೆ ಬೆಳೆದಿದ್ದಾರೆ. ಪ್ರಸ್ತುತ ಬೆಳೆಗಳು ಸಮೃದ್ದವಾಗಿ ಬೆಳೆಯಲು ಮುಂದಿನ ಎರಡು ತಿಂಗಳವರೆಗೆ ನೀರಿನ ಅವಶ್ಯಕತೆ ಇದೆ. ಆಗ ಮಾತ್ರ ಬೆಳೆಗಳು ರೈತರ ಕೈಸೇರುತ್ತವೆ. ಇದನ್ನು ನೀರಾವರಿ ಅಧಿಕಾರಿಗಳು ಮನಗಂಡು ಏ.15ರವರೆಗೆ ಎಡ ಹಾಗೂ ಬಲದಂಡೆ ಮುಖ್ಯ ಕಾಲುವೆಗಳಿಗೆ ನೀರು ಹರಿಸಬೇಕು ಎಂದರು.
ನಿಗಮದ ಅಡಿಯಲ್ಲಿ ಈ ಹಿಂದೆ ಬಾಕಿ ಉಳಿದ ಕಾಮಗಾರಿ ಶೀಘ್ರವೇ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಮನವಿಯಲ್ಲಿ ವಿವರಿಸಲಾಗಿದೆ ಎಂದರು.
ಸಿಇ ಆರ್. ಮಂಜುನಾಥ ಮನವಿ ಸ್ವೀಕರಿಸಿ ಮಾತನಾಡಿ, ಮನವಿಯನ್ನು ಸರ್ಕಾರ, ಎಂಡಿ ಹಾಗೂ ಐಸಿಸಿ ಸಭೆಗೆ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಅಧೀಕ್ಷಕ ಅಭಿಯಂತರ ಆರ್.ಜಿ. ರಾಠೋಡ, ಸಂಘಟನೆ ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಜಂಪಾ, ನಿಂಗನಗೌಡ ಗುಳಬಾಳ, ಮೈಬೂಬ ಅಂಗಡಿ ಸೇರಿದಂತೆ ಗುಳಬಾಳ, ಕಕ್ಕೇರಾ, ನಾರಾಯಣಪುರ, ಮೇಲಿನಗಡ್ಡಿ, ದೇವರಗಡ್ಡಿ ಗ್ರಾಮಗಳ ರೈತರು, ರೈತ ಸಂಘದ ಪದಾಧಿಕಾರಿಗಳು ಇದ್ದರು.