ಇತ್ತೀಚಿನ ಸುದ್ದಿ
ವಿಶ್ವ ಟೇಕ್ವಾಂಡೋ ಕೂಟದಲ್ಲಿ ಬೆಳ್ಳಿ ಗೆದ್ದ ಸಂಹಿತಾಗೆ ಹುಟ್ಟೂರಲ್ಲಿ ಸ್ವಾಗತ, ಅಭಿನಂದನೆ
15/08/2022, 15:26
ಮಂಗಳೂರು(reporterkarnataka.com): ಮಲೇಷ್ಯಾ ಕೌಲಲಾಂಪುರದ ವಿಶ್ವ ಟೇಕ್ವಾಂಡೋ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಸಂಹಿತಾ ಅಲೆವೂರಾಯ ಅವರನ್ನು ಸೋಮವಾರ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ನಾಗರಿಕರ ಪರವಾಗಿ ಅಭಿನಂದಿಸಲಾಯಿತು.
ನೇಪಾಳದಲ್ಲಿ ನಡೆದ ವಿಶ್ವ ಟೇಕ್ವಾಂಡೋ ಕೂಟದಲ್ಲಿ ಚಿನ್ನ ಗಳಿಸಿದ್ದೆ. ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದೆ. 20 ದೇಶಗಳ 50 ಸ್ಪರ್ಧಿಗಳು ಇದ್ದರು. ತೀವ್ರವಾದ ಸ್ಪರ್ಧೆ ಇತ್ತು, ಬೆಳ್ಳಿ ಪದಕದಿಂದ ಸಂತುಷ್ಟನಾಗಿದ್ದೇನೆ. ಶಾರದಾ ಕಾಲೇಜು, ಕೋಚ್ ಗುರುರಾಜ್, ನಿಖಿಲ್, ಕೃಷ್ಣ ಮತ್ತು ತಂದೆ ತಾಯಿಯ ಪ್ರೋತ್ಸಾಹದಿಂದ ಪದಕ ಗೆಲ್ಲಲು ಸಾಧ್ಯವಾಯಿತು ಎಂದು ಸಂಹಿತಾ ಅಲೆವೂರಾಯ ಹೇಳಿದರು.
ಶಿವಳ್ಳಿ ಸ್ಪಂದನ ಅಧ್ಯಕ್ಷ ಕೆ.ಕೃಷ್ಣ ಭಟ್, ವಲಯಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಅಭಿನಂದಿಸಿದರು. ಹೆತ್ತವರಾದ ಕುಂಜತ್ತೋಡಿ ವಾಸುದೇವ ಭಟ್ ಮತ್ತು ದೀಪಾ ಕೆ.ಎಸ್. ಮತ್ತು ಋತ್ವಿಕ್ ಅಲೆವೂರಾಯ ಇದ್ದರು.
ಕಾಲೇಜಿನಲ್ಲಿ ಅಭಿನಂದನೆ: ಶಾರದಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿಸಲಾಯಿತು. ಶಾರದಾ ಕಾಲೇಜಿನ ಮುಖ್ಯಸ್ಥ ಎಂ.ಬಿ.ಪುರಾಣಿಕ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಇದ್ದರು.
ಬಳಿಕ ಕದ್ರಿ ಬಡಾವಣೆಯಲ್ಲಿ ಮಹಿಳಾ ಬಳಗದವರು ಸ್ವಾಗತಿಸಿ, ಪದಕ ಗೆದ್ದು ಊರಿಗೆ ಖ್ಯಾತಿ ತಂದ ಸಂಹಿತಾ ಅಲೆವುರಾಯ ಅವರಿಗೆ ಅಭಿನಂದಿಸಿ, ಜೈಕಾರ ಕೂಗಿದರು.