ಇತ್ತೀಚಿನ ಸುದ್ದಿ
ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!?
17/05/2022, 19:54
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮೇ17ರಂದು ಕೆಲ ಮಕ್ಕಳನ್ನು ಬಳಸಿ ಶಾಲೆ ಸ್ವಚ್ಚತೆ ಮಾಡಿಸಲಾಗಿದೆ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಹತ್ತಿಸಿ ಮಾಳಿಗಿ ಮೇಲ್ಭಾಗದಲ್ಲಿದ್ದ, ಭಾರೀ ಗಾತ್ರದ ಸಿಮೆಂಟ್ ತ್ಯಾಜ್ಯದ ಗುಪ್ಪೆಯನ್ನು ತೆರವುಗೊಳಿಸಲು ಮಕ್ಕಳನ್ನು ಬಳಸಲಾಗಿದೆ. ಮಕ್ಕಳನ್ನು ಕಟ್ಟಡದ ಮೇಲ್ಭಾಗದ ಚಾವಣೆ ಮೇಲೆ ಹತ್ತಲು ತಿಳಿಸಿದ್ದು, ಕಸ ಹಾಗೂ ತ್ಯಾಜ್ಯ ನೀರು ಮತ್ತು ಸಿಮೆಂಟ್ ತ್ಯಾಜ್ಯವನ್ನು ಕೀಳಲು ಸೂಚಿಸಿದ್ದಾರೆ.
ತ್ಯಾಜ್ಯ ತೆಗೆಯಲು ತಾಸು ಗಟ್ಟಲೆ ಮಕ್ಕಳಿಗೆ ಸಾಮಾಗ್ರಿಗಳನ್ನು ನೀಡಿ ತಾಸುಗಟ್ಟಲೆ ಕೆಲಸ ಮಾಡಿಸಲಾಗಿದೆ. ಶಾಲಾ ಬಿಸಿಯೂಟ ಕೋಣೆಯ ಮೇಲ್ಭಾಗದಲ್ಲಿದ್ದ ಕಸ ಹಾಗೂ ತ್ಯಾಜ್ಯ ಸಿಮೆಂಟ್ ಕಿತ್ತು ತೆಗೆಯಲು, ಅವರಿಗೆ ಸುತ್ತಿಗೆ ಹಾಗೂ ಕಿರಿ ಹಾರೆ ಕೊಟ್ಟು ಕೆಲಕ್ಕೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಸಲಿಗೆ ಪೂಜಾರ ಹಳ್ಳಿ ತಾಂಡ ಕೂಡ್ಲಿಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯುವರಾಜ ನಾಯಕ ರವರ ಅಜ್ಜಿಯ ತವರು ಊರೆಂದು ತಿಳಿದುಬಂದಿದೆ. ಬಿ.ಇ.ಓರವರ ನಂಟಿರುವ ಗ್ರಾಮದ ಶಾಲೆಯಲ್ಲಿ ಈ ದುರಾವಸ್ತೆ ಜರುಗಿದೆ. ಶಾಲಾವರಣ ದನಗಳ ಕೊಟ್ಟಿಗೆ ರೂಪದಲ್ಲಿದೆ. ಕಸ ತ್ಯಾಜ್ಯದಿಂದ ಶಾಲಾವರಣ ತುಂಬಿದೆ. ಮಳೆ ನೀರು ನಿಂತು ಕೊಚ್ಚೆ ಗುಂಡಿ ನಿರ್ಮಾಣವಾಗಿದೆ. ಆದರೂ ಸಂಬಂಧಿಸಿದವರು ಕ್ರಮ ಜರುಗಿಸಿಲ್ಲ. ಮಕ್ಕಳಿಗೆ ಶಿಸ್ಥಿನೊಂದಿಗೆ ಶಿಕ್ಷಣ ನೀಡಬೇಕಾಗಿರುವ ಗುರುಗಳು, ಅವರೇ ನಿಂತು ಮಕ್ಕಳಿಗೆ ಗಾರೆ ಹಾಗೂ ಕಸ ಮತ್ತು ಸಿಮೆಂಟ್,ತ್ಯಾಜ್ಯ ನೀರು ಬಳಿಯಲು ಬಳಸಿಕೊಂಡಿದ್ದಾರೆ, ಏನೂ ತಿಳಿಯದ ಮಕ್ಕಳಿಗೆ ಶಿಕ್ಷಣ ನೀಡದೇ ಅವರಿಗೆ ಗಾರೆ ಕೆಲದ ತರಬೇತಿ ನೀಡಿದಂತಹ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.ಈ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ, ಹಾಗೂ ನಾಗರೀಕರಲ್ಲಿ ಕೆಲವರಲ್ಲಿ ಮಾತ್ರ ಪರವಾದ ಅಭಿಪ್ರಾಯವಿದೆ. ಬಹುತೇಕರಲ್ಲಿ ಖಂಡನೀಯ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಸಿದಂತೆ ಸಿಬ್ಬಂದಿ ವಿರುದ್ಧ ಶಿಸ್ಥು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.