ಇತ್ತೀಚಿನ ಸುದ್ದಿ
ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ: ಚಂದ್ರಕಾಂತ್ ಗೋರೆ
17/01/2022, 18:36
ಪುತ್ತೂರು(reporterkarnataka.com): ವಿದ್ಯಾರ್ಥಿಗಳಲ್ಲಿ ಹಲವಾರು ಸುಪ್ತವಾಗಿ ಪ್ರತಿಭೆಗಳಿವೆ. ಆ ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆಗಳು ಅತ್ಯವಶ್ಯಕವಾಗಿದೆ. ಹಾಗಾಗಿ ವಿದ್ಯಾರ್ಥಿಯು ತನ್ನ ಜೀವನದಲ್ಲಿ ದೊರಕುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಬೇಕು.ಪ್ರತಿಭೆಯನ್ನು ಪ್ರದರ್ಶಿಸುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಅಂಬಿಕಾ ಪದವಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ್ ಗೋರೆ ಹೇಳಿದರು.
ಅವರು ನಗರದ ನಟ್ಟೋಜ ಪೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪ್ರತಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ಅನುಪಮ ಪ್ರತಿಭಾ ವೇದಿಕೆಯಲ್ಲಿ ನಡೆದ ‘ಚೀಟಿ ಹೆಕ್ಕಿ ಅಭಿನಯಿಸುವುದು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮನುಷ್ಯನು ಹಲವಾರು ದುಃಖ ದುಮ್ಮಾನಗಳನ್ನು ಹೊಂದಿರುತ್ತಾನೆ. ಮಾನಸಿಕವಾಗಿ ಬೇಸರಗಳನ್ನು ಅನುಭವಿಸುತ್ತಿರುತ್ತಾನೆ. ಅಂತಹ ಭಾವನೆಗಳನ್ನು ವ್ಯಕ್ತಪಡಿಸಲು,ಮನಸ್ಸಿನ ವಿಚಾರಗಳನ್ನು ಹೊರತೆಗೆಯಲು ಪ್ರತಿಭಾ ವೇದಿಕೆಗಳು ಅವಕಾಶವನ್ನು ನೀಡುತ್ತದೆ.ವೇದಿಕೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಚೈತನ್ಯಭರಿತವಾಗುತ್ತದೆ ಮತ್ತು ಉಲ್ಲಾಸಗೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಪದವಿ ವಿದ್ಯಾಲಯಗಳು ಪಠ್ಯದ ಜೊತೆಗೆ, ಪಠ್ಯೇತರ ವಿಷಯಗಳಿಗೂ ಸಮಾನ ಮಹತ್ವವನ್ನು ನೀಡಿದೆ.ವಿದ್ಯಾರ್ಥಿಗಳು ಮುಜುಗರದ ಕಟ್ಟೆಯನ್ನು ಒಡೆದು ಮುಕ್ತವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.ಆ ವೇದಿಕೆಗಳು ತಮ್ಮನ್ನು ತಾವು ತಿದ್ದಿಕೊಳ್ಳಲಿರುವ ವೇದಿಕೆಗಳೆಂದು ಭಾವಿಸಬೇಕು.ಹಾಗಿದ್ದರೆ ಮಾತ್ರ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದರು.
ವಿದ್ಯಾರ್ಥಿಗಳಾದ ಕೃಷ್ಣಕಿಶೋರ, ಕಾರ್ತಿಕ್, ವರೇಣ್ಯ, ಸಮೀಕ್ಷಾ, ಮನೀಷ್,ರಾಹುಲ್,ಭರತ್,ಮಹಿಮಾ, ಸ್ಫೂರ್ತಿ,ಪ್ರಿಯಾ,ಶ್ರಾವ್ಯ,ಅಂಕಿತಾ,ಪಂಚಮಿ,ದೀಕ್ಷಾ,ಮೋಹನ್ ಆಚಾರ್ಯ ಮತ್ತು ಸಾಯಿಶ್ವೇತ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.ಈ ಸಂಧರ್ಭದಲ್ಲಿ ಹಿಂದಿನ ಅನುಪಮ ವೇದಿಕೆಯಲ್ಲಿ ಉತ್ತಮ ಕವನ ರಚನೆ ಮಾಡಿದ ವಿದ್ಯಾರ್ಥಿನಿ ಪಂಚಮಿ ಹಾಗೂ ಕಥೆ ರಚನೆ ಮಾಡಿದ ವಿದ್ಯಾರ್ಥಿನಿ ಶ್ರೀಹರ್ಷ ಇವರಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಅನುಪಮ ಪ್ರತಿಭಾ ವೇದಿಕೆಯ ಕಾರ್ಯದರ್ಶಿ ವೈಷ್ಣವಿ ಜೆ ರಾವ್ ಉಪಸ್ಥಿತರಿದ್ದರು. ಪತ್ರಿಕೋದ್ಯಮ ಪ್ರಥಮ ವರ್ಷದ ವಿದ್ಯಾರ್ಥಿನಿ ಪಂಚಮಿ ಸ್ವಾಗತಿಸಿದರು.ತೃತೀಯ ಪತ್ರಿಕೋದ್ಯಮದ ವಿದ್ಯಾರ್ಥಿ ಮನೀಷ್ ವಂದಿಸಿ,ದ್ವಿತೀಯ ಪತ್ರಿಕೋದ್ಯಮದ ವಿದ್ಯಾರ್ಥಿನಿ ಮೇಘಾ ಡಿ. ನಿರೂಪಿಸಿದರು.