ಇತ್ತೀಚಿನ ಸುದ್ದಿ
ವಿಧಾನಸಭೆ ಚುನಾವಣೆ: ಕೈ ಪಾಳಯದಲ್ಲಿ ಟಿಕೆಟ್ ಗೆ ಭಾರಿ ಕುಸ್ತಿ; ಕೇಸರಿ ಪಡೆಯಲ್ಲಿ ಹಾಲಿಗಳಿಗೆ ಅವಕಾಶ ಜಾಸ್ತಿ
01/12/2022, 21:50

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.ಕಾಂ
ಮುಂಬರುವ ವಿಧಾನಸಭಾ ಚುನಾವಣೆಯ ಕಾವು ಕರಾವಳಿಯ ಪ್ರಮುಖ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಿಧಾನವಾಗಿ ಏರ ತೊಡಗಿದೆ. ಆಡಳಿತರೂಢ ಬಿಜೆಪಿಯಲ್ಲಿ ಹಾಲಿ ಶಾಸಕರೇ ಮತ್ತೆ ಸ್ಪರ್ಧಿಸುವುದರಿಂದ ಪಕ್ಷದೊಳಗೆ ಟಿಕೆಟ್ ವಿಷಯದಲ್ಲಿ ಯಾವುದೇ ಗೊಂದಲ ಕಂಡು ಬರುತ್ತಿಲ್ಲ. ಆದರೆ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಭಾರಿ ಪೈಪೋಟಿ, ಕಾದಾಟ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನಿಂದ
ಮಂಗಳೂರು ಕ್ಷೇತ್ರದಿಂದ ಕನಿಷ್ಠ ಆಕಾಂಕ್ಷಿಗಳಿದ್ದರೆ, ಮಂಗಳೂರು ಉತ್ತರದಿಂದ ಗರಿಷ್ಠ ಆಕಾಂಕ್ಷಿಗಳು ಟಿಕೆಟ್ ರೇಸ್ ನಲ್ಲಿದ್ದಾರೆ. ಮಂಗಳೂರು ಕ್ಷೇತ್ರದಿಂದ ಹಾಲಿ ಶಾಸಕ, ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಅವರು ಒಬ್ಬರೇ ಟಿಕೆಟ್ ಗೆ ಕೆಪಿಸಿಸಿಗೆ
ಅರ್ಜಿ ಸಲ್ಲಿಸಿದ್ದಾರೆ. ಆದರೆ ಮಂಗಳೂರು ಉತ್ತರದಿಂದ ಮಾಜಿ ಶಾಸಕ ಮೊಯ್ದೀನ್ ಬಾವಾ ಸಹಿತ 9 ಮಂದಿ ಆಕಾಂಕ್ಷಿಗಳು ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ಮಂಗಳೂರು ಉತ್ತರ ಬಿಟ್ಟರೆ ಮಂಗಳೂರು ದಕ್ಷಿಣದಿಂದ ಕಾಂಗ್ರೆಸ್ ನಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ದಕ್ಷಿಣದಿಂದ 7’ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸೇರಿದ್ದಾರೆ. ಬೆಳ್ತಂಗಡಿ, ಮೂಡುಬಿದಿರೆ ಮತ್ತು ಬಂಟ್ವಾಳದಿಂದ ತಲಾ ಮೂವರು ಮತ್ತು
ಸುಳ್ಯದಿಂದ ಐವರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಶಾಸಕರಾದ ಕೆ ವಸಂತ ಬಂಗೇರ (ಬೆಳ್ತಂಗಡಿ), ಬಿ. ರಮಾನಾಥ್ ರೈ (ಬಂಟ್ವಾಳ), ಶಕುಂತಲಾ ಟಿ. ಶೆಟ್ಟಿ (ಪುತ್ತೂರು),
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ (ಮೂಡುಬಿದಿರೆ)ಯಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದಾರೆ.
ಮಿಥುನ್ ರೈ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಇನ್ನು ಆಡಳಿತರೂಢ ಬಿಜೆಪಿಯ ವಿಷಯಕ್ಕೆ ಬರುವುದಾದರೆ, ಇಲ್ಲಿನ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರ ಗೆದ್ದುಕೊಂಡಿರುವ ಬಿಜೆಪಿಯ ಅಭ್ಯರ್ಥಿಗಳೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಹೆಚ್ಚಿದೆ. ಹಾಲಿ ಶಾಸಕರನ್ನು ಬದಲಾಯಿಸಿ ಹೊಸ ಮುಖಗಳಿಗೆ ಅವಕಾಶ ನೀಡುವ ರಿಸ್ಕ್ ಗೆ ಬಿಜೆಪಿ ವರಿಷ್ಠರು ಕೈ ಹಾಕುವ ಸಾಧ್ಯತೆ ಬಹಳ ಕಡಿಮೆ ಇದೆ.