ಇತ್ತೀಚಿನ ಸುದ್ದಿ
ವಿಧಾನ ಸಭೆ ಚುನಾವಣೆ: ಅಳಪೆ ಪ್ರದೇಶದಲ್ಲಿ ಮನೆ ಮನೆ ಬ್ಯಾಲೆಟ್ ಮತದಾನ: ಮೇ 6ಕ್ಕೆ ಕೊನೆ
02/05/2023, 14:07
ಮಂಗಳೂರು(reporterkarnataka.com): ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾದ ಮನೆಯಿಂದಲೇ ಮತದಾನ ಏಪ್ರಿಲ್ 29ರಂದು ಆರಂಭಗೊಂಡಿದ್ದು, ಮೇ 6 ರವರೆಗೆ ಬ್ಯಾಲೆಟ್ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇಂದು ನಗರದ 50ನೇ ವಾರ್ಡ್ ನ ಅಳಪೆ ಪ್ರದೇಶದಲ್ಲಿ ಮನೆ ಮನೆ ಮತದಾನ ನಡೆಯಿತು.
ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷಚೇತನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಮಾಡುವ ವೇಳೆ ಅಧಿಕಾರಿಗಳು ವಿಡಿಯೋ ರೆಕಾರ್ಡಿಂಗ್ ಮಾಡುತ್ತಾರೆ. ಮತದಾನದ ನಂತರ ಸ್ಟ್ರಾಂಗ್ ರೂಂಗೆ ಮತ ಪೆಟ್ಟಿಗೆಯನ್ನು ರವಾನಿಸಲಾಗುತ್ತದೆ. ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹಾಗೂ ಪೊಲೀಸರಿಗೆ ಬ್ಯಾಲೆಟ್ ಮತದಾನದ ವ್ಯವಸ್ಥೆ ಮಾಡಲಾಗಿದ್ದು, ಇವರು ಕೂಡ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬಹುದು. ಈ ಎಲ್ಲ ಮತಗಳನ್ನೂ ಮೇ 13 ರಂದು ಮತ ಎಣಿಕೆ ದಿನ ತೆರೆಯಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.