ಇತ್ತೀಚಿನ ಸುದ್ದಿ
ವಿಧಾನಸಭೆ ಚುನಾವಣೆ: ಸ್ವಂತ ಬಲದಿಂದ ಗೆಲ್ಲೋರಿಗೆ ಬಿಜೆಪಿ ಮೊದಲ ಆದ್ಯತೆ: ಮಿಕ್ಕ ಅಭ್ಯರ್ಥಿಗಳಿಗೆ ಕೋಕ್ ಸಾಧ್ಯತೆ
30/03/2022, 23:16
ಹೊಸದಿಲ್ಲಿ(reporterkarnataka.com): ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಗದ್ದುಗೆ ಹಿಡಿದ ಬಳಿಕ ಬಿಜೆಪಿ ಹೈಕಮಾಂಡ್‌ನ ಮುಂದಿನ ಟಾರ್ಗೆಟ್ ಗುಜರಾತ್ ಮತ್ತು ಕರ್ನಾಟಕ ಆಗಿದ್ದು ಈ ವರ್ಷದ ಅಂತ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ತಯಾರಿ ನಡೆಸಿದ್ದು, ರಾಜ್ಯ ಬಿಜೆಪಿಯಲ್ಲಿ ಸ್ವಂತ ಶಕ್ತಿಯಿಂದ ಗೆಲ್ಲುವ ಕುದುರೆಗಳೆಷ್ಟು? ಬಿಜೆಪಿ ಸಿಂಬಲ್‌ನಿಂದ ಗೆಲ್ಲುವವರು ಯಾರು? ಸಿಂಬಲ್ ಮತ್ತು ಸ್ವಂತ ಬಲ ಎರಡೂ ಸೇರಿ ಗೆಲ್ಲುವವರು ಎಷ್ಟು? ಎಂಬುದರ ಬಗ್ಗೆ ರಹಸ್ಯ ಸರ್ವೇ ಮಾಡಲು ಬಿಜೆಪಿ ಹೈಕಮಾಂಡ್ ಅಖಾಡಕ್ಕೆ ಇಳಿದಿದೆ ಎನ್ನಲಾಗಿದೆ.
ಏಪ್ರಿಲ್, ಮೇ, ಜೂನ್ ಮೂರು ತಿಂಗಳು ಮೂರು ಗುಪ್ತ ಸರ್ವೇ ನಡೆಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಸುಳಿವು ನೀಡಿದೆ. ಜುಲೈ ಅಂತ್ಯದ ವೇಳೆಗೆ ಸಂಭವನೀಯ ಪಟ್ಟಿಯಲ್ಲಿ ಯಾರು ಮುಂದೆ, ಯಾರು ಹಿಂದೆ ಇರ್ತಾರೆ ಎಂಬ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
ವಿಧಾನಸಭೆ ಚುನಾವಣೆಗೆ 11 ತಿಂಗಳು ಬಾಕಿ ಇರುವ ಮೊದಲೇ ಬಿಜೆಪಿ ಹೈಕಮಾಂಡ್‌ನಿಂದ ತಂತ್ರ ರೂಪಿಸಲಾಗುತ್ತಿದ್ದು, ಈಗಾಗಲೇ ಆರ್‌ಎಸ್‌ಎಸ್ ಮುಖಂಡರಿಂದಲೂ ಒಂದು ವರದಿ ರವಾನೆ ಆಗಿದೆ ಎನ್ನಲಾಗಿದೆ. ಸ್ವಂತ ಶಕ್ತಿಯಿಂದ ಗೆಲ್ಲುವವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡೋದು ಬೇಡ ಎಂದು ಆರ್‌ಎಸ್ಎಸ್ ಸಲಹೆ ನೀಡಿದೆ ಅಂತ ಮೂಲಗಳು ಮಾಹಿತಿ ನೀಡಿವೆ.
ಪಕ್ಷದ ಸಿಂಬಲ್‌ನಿಂದ ಗೆಲ್ಲುವ, ಗೆಲ್ಲುತ್ತಿರುವವರ ಆಯ್ಕೆ ವಿಚಾರದಲ್ಲಿ ಈ ಸಲ ಬದಲಾವಣೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಪಕ್ಷ, ಸ್ವಂತ ಬಲ ಎರಡೂ ಸೇರಿಸಿ ಗೆಲ್ಲುವವರಿಗೆ ಟಿಕೆಟ್ ನೀಡುವಾಗ ಎಚ್ಚರ ವಹಿಸುವಂತೆಯೂ ಸಂಘದಿಂದ ಸಲಹೆ ರವಾನೆಯಾಗಿದೆ. ಹಾಗಾಗಿ ಈ ಮೂರು ಅಂಶಗಳನ್ನೊಳಗೊಂಡ ಮೂರು ಸರ್ವೇಗಳ ಬಳಿಕವಷ್ಟೇ ಸಂಭವನೀಯ ಟಿಕೆಟ್ ಪಟ್ಟಿ ರೆಡಿ ಮಾಡಲು ಪ್ಲಾನ್ ಮಾಡಲಾಗಿದೆ.