ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಚುನಾವಣೆ: ನೀತಿ ಸಂಹಿತೆ ಪಾಲಿಸಲು ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ಸೂಚನೆ
21/09/2024, 09:53
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚೆಕ್ ಪೋಸ್ಟ್ ಹೊರತುಪಡಿಸಿ ಉಳಿದಂತೆ ಸಾಮಾನ್ಯ ಚುನಾವಣೆಯಲ್ಲಿ ಪಾಲನೆ ಆಗಿರುವ ಎಲ್ಲಾ ನೀತಿ ಸಂಹಿತೆಗಳು ಈ ಚುನಾವಣೆಯಲ್ಲಿ ಅನ್ವಯವಾಗಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು. ಪ್ರಚಾರ ಸಭೆಗಳಿಗೆ ಅನುಮತಿ ಪಡೆಯಬೇಕೆಂದು ಅವರು ತಿಳಿಸಿದರು.
ವಿವಿಧ ಅನುಮತಿಗಳು ಒಂದೇ ಕಡೆ ಸಿಗುವಂತಾಗಲು ಏಕಗವಾಕ್ಷಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆ ಕ್ಷೇತ್ರದ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳಿಗೆ ವಿತರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ನಿತಿನ್ ಕುಮಾರ್, ಗುರುಚರಣ್ (ಬಿಜೆಪಿ) ನೀರಜ್ ಪಾಲ್(ಕಾಂಗ್ರೆಸ್) ಮುನೀರ್ ಮುಕ್ಕಚೇರಿ (ಜೆಡಿಎಸ್) ಶನೋನ್ ಲಾರೆನ್ಸ್ (ಆಮ್ ಆದ್ಮಿ) ಮತ್ತಿತರರು ಉಪಸ್ಥಿತರಿದ್ದರು.