ಇತ್ತೀಚಿನ ಸುದ್ದಿ
ವಕ್ಫ್ ನೋಟಿಸ್ ಸರಕಾರದ ವ್ಯವಸ್ಥಿತ ಷಡ್ಯಂತ್ರ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್
05/11/2024, 18:18
ಬೆಂಗಳೂರು(reporterkarnataka.com): ವಕ್ಫ್ ಆಸ್ತಿ ಒತ್ತುವರಿ ನೆಪದಲ್ಲಿ ರಾಜ್ಯದ ರೈತರ ಭೂಮಿ ಕಬಳಿಸಲು ಸರ್ಕಾರ ಮುಂದಾಗಿದ್ದು ಆಕಸ್ಮಿಕವೂ ಅಲ್ಲ, ಕಣ್ತಪ್ಪಿನ ಕಾರ್ಯವೂ ಅಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿದ್ದ ಶಾಲಿನಿ ರಜನೀಶ್ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 21767 ಎಕರೆ ವಕ್ಫ್ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಈ ಸಂಬಂಧ ಕಂದಾಯ ಹಾಗೂ ವಕ್ಫ್ ಇಲಾಖೆ ಜಂಟಿ ಸಭೆ ನಡೆಸಿತ್ತು. ಸಿದ್ದರಾಮಯ್ಯನವರ ಸೂಚನೆ ಇಲ್ಲದೇ ಅಧಿಕಾರಿಗಳು ಇಂಥ ದರಿದ್ರ ನಿರ್ಣಯ ತೆಗದುಕೊಳ್ಳಲು ಸಾಧ್ಯವಿತ್ತೇ ? ಎಂದು ಪ್ರಶ್ನಿಸಿದ್ದಾರೆ.
ಈಗ ಪರಿಸ್ಥಿತಿ ವಿಕೋಪಕ್ಕೆ ಹೋದ ನಂತರ ಬಿಜೆಪಿಯವರು ಅನಗತ್ಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಬುರುಡೆ ಬಿಡುತ್ತಿದ್ದಾರೆ. ಇಷ್ಟೆಲ್ಲ ಸ್ಪಷ್ಟೀಕರಣ ನೀಡುವ ಮೊದಲು ಶಾಲಿನಿ ರಜನೀಶ್ ಅವರು ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಪತ್ರ ಬರೆದಿದ್ದು ಸತ್ಯವೋ, ಸುಳ್ಳೋ ಎಂಬುದನ್ನು ನೀವು ಸ್ಪಷ್ಟಪಡಿಸಿ. ಆಗ ನಿಮ್ಮ ಸರ್ಕಾರದ ಜೆಹಾದಿ ನೀತಿ ಬಯಲಾಗುತ್ತದೆ ಎಂದು ಟೀಕಿಸಿದ್ದಾರೆ.
*ರಾಜೀನಾಮೆಗೆ ಆಗ್ರಹ*: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ರಾಜೀನಾಮೆಗೆ ಆಗ್ರಹಿಸಿರುವ ಅವರು, ಹಲೋ ಅಪ್ಪಾದಿಂದ ಪ್ರಾರಂಭವಾದ ರಾಜ್ಯ ಸರ್ಕಾರದ ವರ್ಗಾವಣೆ ವ್ಯವಹಾರ ಈಗ ಅಬಕಾರಿ ಇಲಾಖೆ ಸಚಿವ ತಿಮ್ಮಾಪುರ್ ವರೆಗೆ ಬಂದು ನಿಂತಿದೆ.
ವರ್ಗಾವಣೆ ವ್ಯವಹಾರ, ಲೈಸೆನ್ಸ್ ಗೆ ಕಾಸು, ಸನ್ನದುದಾರರಿಂದ ಮಂಥ್ಲಿ ಸಂಗ್ರಹಣೆ ಸೇರಿದಂತೆ ಅಬಕಾರಿ ಸಚಿವರು ವಾರ್ಷಿಕ 500 ಕೋಟಿ ರೂ.ಖಮಾಯಿ ಸಂಗ್ರಹಿಸುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರ ಸಂಘ ಆರೋಪ ಮಾಡಿದೆ.
ರಾಜ್ಯ ಸರ್ಕಾರದ ಹಗರಣಗಳ ಪಟ್ಟಿಗೆ ಈಗ ನಿಜಾರ್ಥದಲ್ಲಿ ಕಿಕ್ಕೇರಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರೇ ಮಂಥ್ಲಿ ಕಲೆಕ್ಟರ್ ತಿಮ್ಮಾಪುರ ಅವರನ್ನು ಸಂಪುಟದಿಂದ ಕಿತ್ತೊಗೆಯುತ್ತೀರೋ ಅಥವಾ ವರಿಷ್ಠರ ರಾಜಸ್ವ ಕೊರತೆ ನೀಗಿಸಲು ಪಾಲು ಕೇಳುತ್ತೀರೋ ? ಎಂದು ಟೀಕಿಸಿದ್ದಾರೆ.