ಇತ್ತೀಚಿನ ಸುದ್ದಿ
ಉತ್ತರ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಹತ್ಯೆ: ಮಂಗಳೂರಿನಲ್ಲಿ ಪ್ರತಿಭಟನಾ ಪ್ರದರ್ಶನ
04/10/2021, 20:15
ಮಂಗಳೂರು(reporterkarnataka.com) ಉತ್ತರ ಪ್ರದೇಶ ಲಖಿಂಪುರ್ ಬೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ 4 ಮಂದಿ ರೈತರ ಹತ್ಯೆ ಮಾಡಿರುವುದನ್ನು ಖಂಡಿಸಿ, ವಿವಿಧ ರೈತ ಕಾರ್ಮಿಕ ದಲಿತ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ರಾಜ್ಯ ರೈತ ಸಂಘದ ರಾಜ್ಯ ನಾಯಕ ರವಿಕಿರಣ್ ಪುಣಚ ಮಾತನಾಡಿ,ರೈತ ವಿರೋಧಿಯಾದ ಕೃಷಿ ಕಾಯಿದೆಗಳ ವಿರುದ್ದ ಕಳೆದ 10 ತಿಂಗಳಿನಿಂದ ದೇಶದ ರೈತರು ಸಮರಧೀರ ಹೋರಾಟದಲ್ಲಿ ತೊಡಗಿದ್ದರೂ ಕನಿಷ್ಠ ರೈತರ ಅಹವಾಲನ್ನು ಆಲಿಸಲು ಸಿದ್ದವಿಲ್ಲದ ನರೇಂದ್ರ ಮೋದಿ ಸರಕಾರವು ರೈತ ಹೋರಾಟವನ್ನು ಅಪಹಾಸ್ಯ ಮಾಡುತ್ತಿದ್ದು, ಇಲ್ಲಸಲ್ಲದ ಅಪಪ್ರಚಾರವನ್ನು ಮಾಡುತ್ತಿದೆ.
ಹೋರಾಟದ ಹಾದಿಯನ್ನು ತಪ್ಪಿಸಲು ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ಕೇಂದ್ರ ಸಚಿವರ ಬೆಂಗಾವಲು ವಾಹನ ರೈತರ ಮೇಲೆಯೇ ಹರಿದು ರೈತರನ್ನು ಹತ್ಯೆ ನಡೆಸಿರುವ ಫ್ಯಾಸಿಸ್ಟ್ ಮೋದಿ ಸರಕಾರ ಹಾಗೂ ಗೂಂಡಾ ರಾಜ್ಯವಾದ ಯೋಗಿ ಸರಕಾರಗಳ ಅಮಾವೀಯ ಕೃತ್ಯವನ್ನು ದೇಶದ ಜನತೆ ಒಂದಾಗಿ ಖಂಡಿಸಲೇಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ,ಸ್ವಾತಂತ್ರ್ಯ ಚಳುವಳಿಯ ಬಳಿಕ ದೀರ್ಘಕಾಲದ ಐತಿಹಾಸಿಕ ಹೋರಾಟವಾಗಿ ಹೊರಹೊಮ್ಮಿದ ರೈತರ ಹೋರಾಟವು ದೇಶ ಉಳಿಸುವ ದೇಶಪ್ರೇಮಿ ಹೋರಾಟವಾಗಿ ಪರಿವರ್ತನೆಗೊಂಡಿದೆ. ಇಂತಹ ರೈತರ ಹೋರಾಟವನ್ನು ವಿರೋಧಿಸುವ, ಅಪಹಾಸ್ಯ ಮಾಡುವ, ವಿನಾಃ ಕಾರಣ ಅಪಪ್ರಚಾರ ಮಾಡುವವರು ನಿಜಕ್ಕೂ ದೇಶದ್ರೋಹಿಗಳು. ಬದಲಾಗಿ ರೈತ ವಿರೋಧಿಯಾದ ಕೃಷಿ ಕಾಯಿದೆಗಳನ್ನು ವಿರೋಧಿಸುವವರು ದೇಶದ್ರೋಹಿಗಳೆಂದು ಜರೆಯುವ ಪ್ರಧಾನಿಗಳ ಹೇಳಿಕೆ ತೀರಾ ಖಂಡನೀಯವಾಗಿದೆ ಎಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘಟನೆಗಳ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ರೆನ್ನಿ ಡಿಸೋಜ,ಡಿವೈಎಫ್ ಐ ನಾಯಕರಾದ ಸಂತೋಷ್ ಬಜಾಲ್ ಮುಂತಾದವರು ಮಾತನಾಡಿ, ರೈತರ ಹತ್ಯೆಗೆ ಕಾರಣವಾದ ಕೇಂದ್ರದ ನರೇಂದ್ರ ಮೋದಿ ಸರಕಾರ ಹಾಗೂ ಉತ್ತರ ಪ್ರದೇಶದ ಯೋಗಿ ಸರಕಾರಗಳ ರೈತ ವಿರೋಧಿ ನಡೆಯನ್ನು ಪ್ರಬಲವಾಗಿ ಖಂಡಿಸಿದರು.
ಈ ಹೋರಾಟದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರಾದ ರಾಮಣ್ಣ ವಿಟ್ಲ, ವಾಸುದೇವ ಉಚ್ಚಿಲ್, ಶೇಖರ್ ಕುತ್ತಾರ್, ಶಾಹುಲ್ ಹಮೀದ್, ಶಬೀರ್ ಅಹಮ್ಮದ್, ಜಾತ್ಯತೀತ ಜನತಾ ದಳದ ಜಿಲ್ಲಾ ನಾಯಕರಾದ ಸುಮತಿ ಎಸ್ ಹೆಗ್ಢೆ,ಅಲ್ತಾಪ್ ತುಂಬೆ, ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ ಐ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ನಿತಿನ್ ಬಂಗೇರ, ನಿತಿನ್ ಕುತ್ತಾರ್, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ ಮುಂತಾದವರು ಭಾಗವಹಿಸಿದ್ದರು.