ಇತ್ತೀಚಿನ ಸುದ್ದಿ
ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ರಾಜೀನಾಮೆ: ನಾಲ್ಕೇ ತಿಂಗಳಲ್ಲಿ ಅಧಿಕಾರದಿಂದ ನಿರ್ಗಮನ
03/07/2021, 17:13

ನವದೆಹಲಿ(reporterkarnataka news): ಉತ್ತರಾಖಂಡ ಮುಖ್ಯಮಂತ್ರಿ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಅವರು ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳಲ್ಲಿ ಅವರು ಅಧಿಕಾರದಿಂದ ನಿರ್ಗಮಿಸಿದ್ದಾರೆ.
ಶುಕ್ರವಾರ ರಾತ್ರಿ 9: 30 ಕ್ಕೆ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಶನಿವಾರ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿಯಾಗಲಿರುವುದಾಗಿ ತಿಳಿಸಿದ್ದರು. ಆದರೆ ಶುಕ್ರವಾರ ರಾತ್ರಿಯೇ 11 ಗಂಟೆಗೆ ರಾಜ್ಯಪಾಲರ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ತಿರತ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ 6 ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು. ಆದರೆ ಕೊವಿಡ್ ಕಾರಣಗಳಿಂದಾಗಿ ಚುನಾವಣೆ ನಡೆಸಲು ಸಾಧ್ಯವಿಲ್ಲದ ಕಾರಣ, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಾರದು ಎಂಬ ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ತ್ರಿವೇಂದ್ರ ಸಿಂಗ್ ರಾವತ್ ಅವರಿಂದ ರಾಜೀನಾಮೆ ಕೊಡಿಸಿದ ನಂತರ ಮಾರ್ಚ್ ನಲ್ಲಿ ತಿರತ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರೂ ರಾಜೀನಾಮೆ ನೀಡಿರುವುದರಿಂದ ಉತ್ತರಾಖಂಡದ ಬಿಜೆಪಿ ಶಾಸಕರು ಇಂದು ಶಾಸಕಾಂಗ ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.