11:06 PM Wednesday8 - January 2025
ಬ್ರೇಕಿಂಗ್ ನ್ಯೂಸ್
ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ… ಎಂಎಸ್‌ ಐಎಲ್‌ ಟೂರ್‌ ಪ್ಯಾಕೇಜ್‌ ಗೆ ಸಚಿವ ಎಂ. ಬಿ. ಪಾಟೀಲ್ ಚಾಲನೆ ಜ.10-12: ಸೌತ್ ಏಷ್ಯಾ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2025; ದೇಶ – ವಿದೇಶದ 2… ದೇಶದ ವೈವಿಧ್ಯತೆ, ಸೌಹಾರ್ದತೆ ಉಳಿಸಿಕೊಳ್ಳುವ ಮೂಲಕ ಆಂತರಿಕವಾಗಿ ಸಶಕ್ತವಾಗಬೇಕಿದೆ: ಧರ್ಮಸ್ಥಳದಲ್ಲಿ ಉಪ ರಾಷ್ಟ್ರಪತಿ… 60% ಕಮೀಷನ್; ನಿಮ್ಮ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಸಿಎಂಗೆ ಕೇಂದ್ರ ಸಚಿವ… ಇದು 60 ಪರ್ಸೆಂಟ್‌ ಕಮಿಷನ್‌ ಸರ್ಕಾರ, ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ: ಪ್ರತಿಪಕ್ಷ ನಾಯಕ… ಹಣ ಕೈಯಲ್ಲಿದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ… ಅರಣ್ಯ ಒತ್ತುವರಿ, ಕಳ್ಳಬೇಟೆ ತಡೆಗೆ ಗರುಡಾಕ್ಷಿ ಅಸ್ತ್ರ: ಆನ್ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ರಾಜ್ಯದಲ್ಲಿ ಎಚ್ ಎಂಪಿವಿ ಸೋಂಕು: ಜನರಲ್ಲಿ ಆತಂಕ ಬೇಡ, ಎಚ್ಚರ ಇರಲಿ; ಆರೋಗ್ಯ… ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ

ಇತ್ತೀಚಿನ ಸುದ್ದಿ

ಉಪಕುಲಪತಿಗಳ ನೇಮಕಾತಿ; ರಾಜ್ಯಪಾಲರಿಗೆ ಸರ್ವಾಧಿಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಿರೋಧ

08/01/2025, 22:30

ಬೆಂಗಳೂರು(reporterkarnataka.com): ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ, ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸರ್ವಾಧಿಕಾರ ನೀಡಿ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಿತ್ತುಕೊಳ‍್ಳಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ಸಣ್ಣ ಅವಕಾಶವನ್ನೂ ಬಿಟ್ಟುಕೊಡದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ಕಣ್ಣು ಈಗ ರಾಜ್ಯದ ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುಜಿಸಿ ನೇಮಕಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಕರಡು ನಿಯಮಾಳಿಗಳನ್ನು ನಮ್ಮ ಸರ್ಕಾರ ಪರಿಶೀಲಿಸಿ, ಇದರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಈಗಿರುವ ನಿಯಮಾವಳಿಗಳ ಪ್ರಕಾರ ಉಪಕುಲಪತಿಗಳ ನೇಮಕಾತಿಗೆ ರಾಜ್ಯ ಸರ್ಕಾರ ಶೋಧನಾ ಸಮಿತಿಯನ್ನು ರಚಿಸುತ್ತಿತ್ತು. ಅದರಲ್ಲಿ ಕುಲಪತಿಗಳಾಗಿರುವ ರಾಜ್ಯಪಾಲರು ಶಿಫಾರಸು ಮಾಡುವ ವ್ಯಕ್ತಿಗಳು ಕೂಡಾ ಸದಸ್ಯರಾಗಿರುತ್ತಿದ್ದರು.ಹೊಸ ನಿಯಮಗಳ ಪ್ರಕಾರ ರಾಜ್ಯಪಾಲರು ಸೂಚಿಸುವ ವ್ಯಕ್ತಿಯೇ ಶೋಧನಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದ ಮೇಲಿನ ನೇರ ಸವಾರಿಯಾಗಿದೆ‌ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ವಿಶ‍್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗಾಗಿ ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿಗಳನ್ನು ಆಹ್ವಾನಿಸಬೇಕೆಂದು ಯುಜಿಸಿ ಹೊಸ ನಿಯಮಾವಳಿಗಳು ಹೇಳುತ್ತಿದೆ. ಇಲ್ಲಿಯ ವರೆಗೆ ಆಯಾ ರಾಜ್ಯಗಳ ವಿದ್ವಾಂಸರಿಗಷ್ಟೇ ಸೀಮಿತವಾಗಿದ್ದ ಕುಲಪತಿಗಳ ಹುದ್ದೆ ಹೊಸ ನಿಯಮಗಳು ಜಾರಿಗೆ ಬಂದರೆ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸ್ಥಾನದಲ್ಲಿ ಅನ್ಯಭಾಷಿಕರು ಬಂದು ಕೂರುವ ಅಪಾಯ ಇದೆ.
ಉಪಕುಲಪತಿಗಳ ನೇಮಕಾತಿಯ ಅರ್ಹತೆಗೆ ಸಂಬಂಧಿಸಿದಂತೆಯೂ ಕೆಲವು ಪ್ರಮುಖ ಬದಲಾವಣಿಗಳನ್ನು ಮಾಡಲಾಗಿದೆ. ಹೊಸ ನಿಯಮಗಳ ಪ್ರಕಾರ ಉಪಕುಲಪತಿಗಳನ್ನು ಕೇವಲ ಅಕಾಡೆಮಿಕ್ ವಲಯದಿಂದ ಮಾತ್ರ ನೇಮಿಸಿಕೊಳ್ಳದೆ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಉದ್ಯಮಿಗಳು, ಸಾರ್ವಜನಿಕ ಆಡಳಿತದ ನೀತಿ ನಿರೂಪಕರು ಸೇರಿದಂತೆ ಬೇರೆ ಕ್ಷೇತ್ರದಲ್ಲಿರುವ ತಜ್ಞರನ್ನು ನೇಮಕಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಬಗೆಯುವ ದ್ರೋಹವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಪಾಲರು ಅನಗತ್ಯವಾಗಿ ಮೂಗುತೂರಿಸುತ್ತಾ ಬಂದಿ‍ದ್ದಾರೆ. ಎಷ್ಟೋ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ ಶಿಫಾರಸನ್ನು ನಿರ್ಲಕ್ಷಿಸಿ ತಮ್ಮ ಆಯ್ಕೆಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ನಿರ್ವಹಣೆ ರಾಜ್ಯ ಸರ್ಕಾರದ ಪರಮಾಧಿಕಾರವಾಗಿದ್ದು ಇದರಲ್ಲಿ ಅನಗತ್ಯವಾದ ಮಧ್ಯಪ್ರವೇಶದಿಂದಾಗಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆ ಏರ್ಪಡುವ ಸಾಧ್ಯತೆ ಇದೆ.
ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಇಂತಹ ನಡವಳಿಕೆಗಳನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಜೊತೆಯಲ್ಲಿ ಈ ಬಗ್ಗೆ ಚರ್ಚಿಸಿ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನ ಮಾಡಲಾಗುವುದು‌ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು