ಇತ್ತೀಚಿನ ಸುದ್ದಿ
ಪಿಎಂ ಗ್ರಾಮ ಸಡಕ ಯೋಜನೆಗಿಂತ ಭಿನ್ನವಾಗಿ ಪ್ರಗತಿ ಪಥ ಯೋಜನೆ ತಿಂಗಳೊಳಗೆ ಜಾರಿ: ಸಚಿವ ಪ್ರಿಯಾಂಕ್ ಖರ್ಗೆ
23/02/2025, 11:47

ಮಂಗಳೂರು(reporterkarnataka.com): ಸರಕಾರದ ವಿರುದ್ಧ ದುಡ್ಡಿಲ್ಲ ಎಂದು ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ. ದುಡ್ಡಿಲ್ಲ ಎಂದು ಯಾವ ಕಾಮಗಾರಿಯನ್ನೂ ನಿಲ್ಲಿಸಲಾಗಿಲ್ಲ. ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಗಿಂತ ಭಿನ್ನವಾಗಿ ಪ್ರಗತಿ ಪಥ ಎಂಬ ಯೋಜನೆಯನ್ನು ರಾಜ್ಯ ಸರಕಾರ ಒಂದು ತಿಂಗಳೊಳಗೆ ಜಾರಿಗೊಳಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮ ಸ್ವರಾಜ್ ಪ್ರತಿಷ್ಠಾನ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಮಂಗಳೂರು ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಶನಿವಾರ ನಡೆದ ‘ಹೊಂಬೆಳಕು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರಗತಿ ಪಥ ಹೆಸರಿನಲ್ಲಿ 7110 ಕಿ.ಮೀ. ಗ್ರಾಮೀಣ ರಸ್ತೆಗಳಿಗೆ 5190 ಕೋಟಿ ರೂ.ಗಳನ್ನು ಖರ್ಚು ಮಾಡಲಾ ಗುತ್ತದೆ. ಇಲ್ಲಿ ಪ್ರಗತಿ ಪಥವಾದರೆ, ನಮ್ಮಲ್ಲಿ ಕಲ್ಯಾಣ ಪಥದಡಿ 1150 ಕಿ.ಮೀ. ರಸ್ತೆಯನ್ನು 1 ಸಾವಿರ ಕೋಟಿ ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಪಾಕೃತಿಕ ವಿಕೋಪದಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೆ ಪ್ರತಿ ಕ್ಷೇತ್ರಕ್ಕೆ ತಲಾ 10 ಕೋಟಿ ರೂ.ಗಳಂತೆ 189 ಕ್ಷೇತ್ರಗಳಿಗೆ 1890 ಕೋಟಿ ರೂ. ಬಿಡುಗಡೆ ಕೆಲವೆಡೆ ಕೆಲಸ ಆರಂಭವಾಗಿದೆ. . ರಾಜ್ಯದ 5770 ಅರಿವು ಕೇಂದ್ರಗಳಲ್ಲಿ 51 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಕೆಎಎಸ್ ಪ್ರಿಲಿಮ್ಸ್‌ನಲ್ಲಿಯೂ ಅರಿವು ಕೇಂದ್ರದಲ್ಲಿ ತರಬೇತು ಹೊಂದಿದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಭಾರತ ಸರಕಾರದ ಸ್ವಚ್ಛ ಭಾರತದ ಕನಸು ನನಸಾಗಿಸಲು ರಾಜ್ಯದಲ್ಲಿ 5712 ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ತಲಾ 2 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಈ ಘಟಕಗಳು ಅತ್ಯಂತ ಪರಿಣಾಮಕಾರಿ ಕಾರ್ಯಗತವಾಗುತ್ತಿವೆ ಎಂದು ಅವರು ಹೇಳಿದರು.
2005ರಲ್ಲಿ ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆಯಡಿ ನಮ್ಮ ಇಲಾಖೆಯಿಂದ 13 ಕೋಟಿ ಮಾನವ ದಿನ ಸೃಷ್ಟಿಸುವ ಗುರಿ ಹೊಂದಲಾಗಿದೆ. 27 ಲಕ್ಷ ಕುಟುಂಬಗಳ 47 ಲಕ್ಷ ಜನ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಚಿವರು ತಿಳಿಸಿದರು.
ಸರಕಾರ ಹಂತದಲ್ಲಿ ಆಗದ 1466000 ಸಣ್ಣ ಪುಟ್ಟ ಕಾಮಗಾರಿಗಳನ್ನು ಸ್ಥಳೀಯಾಡಳಿತದ ಮೂಲಕ ನಡೆಯುತ್ತಿದೆ. ಕೂಸಿನ ಮನೆ ಎಂಬ ವಿನೂತ 3867 ಕೂಸಿನ ಮನೆಗಳು ರಾಜ್ಯಾದ್ಯಂತ ನಡೆಯುತ್ತಿದೆ ಎಂದರು.
ವೇದಿಕೆಯಲ್ಲಿ, ಹಜ್ ಸಚಿವ ರಹೀಮ್ ಖಾನ್,ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ರೈ, ಉಮಾನಾಥ ಕೋಟ್ಯಾನ್, ಐವನ್ ಡಿಸೋಜಾ, ಕಿಶೋರ್ ಕುಮಾರ್, ಮಾಜಿ ಶಾಸಕ ಅಭಯ ಚಂದ್ರ ಜೈನ್, ಶಕುಂತಳಾ ಶೆಟ್ಟಿ ಮತ್ತಿತರರು ಇದ್ದರು.
ಶಾಸಕ ಮಂಜುನಾಥ ಭಂಢಾರಿ ಸ್ವಾಗತಿಸಿದರು.