3:38 PM Tuesday15 - July 2025
ಬ್ರೇಕಿಂಗ್ ನ್ಯೂಸ್
ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ…

ಇತ್ತೀಚಿನ ಸುದ್ದಿ

ಸಿಗಂಧೂರು ಸೇತುವೆಗೆ ಚೌಡೇಶ್ವರಿ ಹೆಸರಿಡಲು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ

15/07/2025, 11:34

ಸಿಗಂಧೂರು(reporterkarnataka.com): ಶರಾವತಿ ನದಿ ಹಿನ್ನೀರಿನಲ್ಲಿ ನಿರ್ಮಿಸಿರುವ ಭಾರತದ 2ನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ಅಂಬಾರಗೋಡ್ಲು-ಕಳಸವಳ್ಳಿ-ಸಿಗಂದೂರು ಸೇತುವೆಗೆ ʼಮಾತಾ ಶ್ರೀ ಚೌಡೇಶ್ವರಿ ಸೇತುವೆʼಯಾಗಿ ಹೆಸರಿಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.


ಸಾಗರ ತಾಲೂಕಿನ ಶ್ರೀಕ್ಷೇತ್ರ ಸಿಗಂಧೂರಿನಲ್ಲಿ ನೂತನ ಸೇತುವೆ ಲೋಕಾರ್ಪಣೆ ಸಮಾರಂಭ ಉದ್ದೇಶಿಸಿ ಮಾತನಾಡಿ, ಈ ಹೊಸ ಸೇತುವೆಗೆ ತಾಯಿ ಶ್ರೀ ಚೌಡೇಶ್ವರಿ ದೇವಿ ಹೆಸರನ್ನೇ ನಾಮಕರಣ ಮಾಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಮನವಿ ಮಾಡಿದರು.
ಸಂಸದ ಬಿ.ವೈ.ರಾಘವೇಂದ್ರ ಅವರ ಒತ್ತಾಸೆಯೂ ಇದೇ ಆಗಿದೆ. ಹಾಗಾಗಿ ಅವರ ಅಭಿಲಾಷೆಯಂತೆ ಸಿಗಂಧೂರು ಸೇತುವೆಗೆ ಮಾತಾ ಚೌಡೇಶ್ವರಿ ಹೆಸರನ್ನು ವೇದಿಕೆಯಲ್ಲಿ ಘೋಷಿಸಬೇಕೆಂದು ಗಡ್ಕರಿ ಅವರನ್ನು ಒತ್ತಾಯಿಸಿದರು.
ದೇಶದಲ್ಲಿ ಇಂದು ಸಚಿವ ನಿತಿನ್‌ ಗಡ್ಕರಿ ಅವರು ಸಂಚಾರ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. 1998-99ರ ದಶಕದಲ್ಲಿ ಹಲವು ಪ್ರಥಮಗಳ ರೂವಾರಿ ಆಗಿದ್ದವರು, ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಶುರು ಮಾಡಿದ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ರೂಪುರೇಷೆ ಕೊಟ್ಟಿದ್ದಲ್ಲದೆ, ದೇಶದಲ್ಲಿ ಹಳ್ಳಿಗಳ ರಸ್ತೆ ಸುಧಾರಣೆ, ವಿದ್ಯುತ್‌ ಯೋಜನೆಗಳನ್ನು ಸಾಕಾರಗೊಳಿಸಿದವರಾಗಿದ್ದಾರೆ ಎಂದು ಬಣ್ಣಿಸಿದರು.

*ಗಡ್ಕರಿ ʼರೋಡ್ಕರಿʼ ಆಗುತ್ತಿದ್ದಾರೆ:* ಈ ಹಿಂದೆ ದೇಶದಲ್ಲಿ ಪ್ರತಿ ದಿನ ಕೇವಲ 7-8 ಕಿಮೀ ರಸ್ತೆ ನಿರ್ಮಾಣವಾಗುತ್ತಿತ್ತು. ಇದೀಗ ಸಚಿವ ನಿತಿನ್‌ ಗಡ್ಕರಿ ಅವರ ಸಾರಥ್ಯದಲ್ಲಿ ನಿತ್ಯವೂ 34 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಗಡ್ಕರಿ ಅವರು ಈಗ ʼರೋಡ್ಕರಿʼ ಎನ್ನುವಷ್ಟರ ಮಟ್ಟಿಗೆ ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಜೋಶಿ ಬಣ್ಣಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವ ಮೊದಲು ದೇಶದಲ್ಲಿ 96000 ಕಿ.ಮೀ. ಹೆದ್ದಾರಿ ನಿರ್ಮಾಣವಾಗಿತ್ತು. ಅದರಲ್ಲೂ 6 ವರ್ಷದ ವಾಜಪೇಯಿ ಅವರ ಆಡಳಿತಾವಧಿಯಲ್ಲಿ 36000 ಕಿ.ಮೀ. ಆಗಿತ್ತು. ಇನ್ನು ಹಲವು ದಶಕಗಳ ಕಾಂಗ್ರೆಸ್‌ ಆಡಳಿತದಲ್ಲಿ 60000 ಕಿ.ಮೀ.ಆಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಹತ್ತೇ ವರ್ಷದ ಅವಧಿಯಲ್ಲಿ ಗಡ್ಕರಿ ಅವರ ಸಾರಥ್ಯದಲ್ಲಿ ಬರೋಬ್ಬರಿ 50000 ಕಿ.ಮೀ. ಹೆದ್ದಾರಿ ನಿರ್ಮಾಣ ಕಂಡಿದೆ ಎಂದರು.
ಕರ್ನಾಟಕದಲ್ಲಿ ಈ ಮೊದಲು 6200 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಇದೀಗ 9600 ಕಿ.ಮೀ.ಗೆ ವಿಸ್ತರಣೆಯಾಗಿದೆ ಎಂದ ಸಚಿವ ಪ್ರಲ್ಹಾದ ಜೋಶಿ ಅವರು ತುಂಬಿದ ಸಭೆಯಲ್ಲಿ ಅಂಕಿ ಅಂಶ ಸಹಿತ ವಿವರ ನೀಡಿ ಹೆದ್ದಾರಿ ಸಚಿವ ನಿತಿನ ಗಡ್ಕರಿ ಅವರ ಕಾರ್ಯವೈಖಯನ್ನು ವರ್ಣಿಸಿದರು.

*ಹೆದ್ದಾರಿಗೆ ₹100 ಲಕ್ಷ ಕೋಟಿ ವ್ಯಯ:* ಪ್ರಧಾನಿ ನರೇಂದ್ರ ಮೋದಿ ಅವರು ನಮಗೆಲ್ಲ ʼಶಂಕುಸ್ಥಾಪನೆ ಮಾಡುವ ಪ್ರತಿ ಅಭಿವೃದ್ಧಿ ಕಾರ್ಯಗಳನ್ನು ನೀವೇ ಉದ್ಘಾಟನೆ ಮಾಡಬೇಕುʼ ಎಂಬ ನಿರ್ದೇಶನ ನೀಡಿದ್ದಾರೆ. ಸಚಿವ ಗಡ್ಕರಿ ಅವರು ಅಕ್ಷರಶಃ ಅದನ್ನು ಪಾಲಿಸುತ್ತ ಬಂದಿದ್ದಾರೆ. 2047ಕ್ಕೆ ಪ್ರತಿ ದಿನ 100 ಕಿ.ಮೀ. ರಸ್ತೆ ನಿರ್ಮಿಸುವ ಗುರಿಯೊಂದಿಗೆ ಸಂಚರಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ₹100 ಲಕ್ಷ ಕೋಟಿ ವ್ಯಯಿಸುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಇಂದು ಅಭಿವೃದ್ಧಿ ಪರ್ವ ನಿರಂತರವಾಗಿದೆ. ಇಷ್ಟರಲ್ಲೇ ವಿಕಸಿತ ಭಾರತ ನಿರ್ಮಾಣವಾಗಲಿದೆ. ಮೂರನೇ ಅತಿ ದೊಡ್ಡ ಅರ್ಥ ವ್ಯವಸ್ಥೆಯ ರಾಷ್ಟ್ರವಾಗಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಇತಿಹಾಸದಲ್ಲೇ ವಿಶಿಷ್ಠ ಎನ್ನುವಂತೆ ₹423.15 ಕೋಟಿ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಿಸಲಾಗಿದೆ. ರಾಜ್ಯದ ಮೊದಲ ಕೇಬಲ್ ಆಧಾರಿತ ಸೇತುವೆ ಇದಾಗಿದ್ದು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ಸಂಪರ್ಕ ಕೊಂಡಿಯೂ ಆಗಲಿದೆ. ಒಂದು ಸಣ್ಣ ರಸ್ತೆಯಂತಿದ್ದ ಇದನ್ನು ಸಚಿವ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಿಸಿ ಅದ್ಭುತ ಸೇತುವೆ ಕಲ್ಪಿಸಿಕೊಟ್ಟಿದ್ದಾರೆ. 110 ಕಿ.ಮೀ.ಸುತ್ತುವರಿಯಬೇಕಿದ್ದ ಸಂಚಾರವನ್ನು ಇದೀಗ ಕೇವಲ 30 ಕಿ.ಮೀ.ವ್ಯಾಪ್ತಿಗೆ ತಂದಿದ್ದಾರೆ ಎಂದು ಹೇಳಿದರು.
1942ರಲ್ಲಿ ಮೈಸೂರು ಮಹಾರಾಜರು ಹಿರೇಭಾಸ್ಕರ ಅಣೆಕಟ್ಟು ನಿರ್ಮಿಸಿದ ಬಳಿಕ 1964ರಲ್ಲಿ 1819 ಅಡಿ ಎತ್ತರಿಸಿದ ನಂತರ ಈ ಭಾಗದಲ್ಲಿ ತೀವ್ರ ಸಮಸ್ಯೆ ಎದುರಾಗಿತ್ತು. ಜನರ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಗಡ್ಕರಿ ಅವರ ಇಚ್ಛಾಶಕ್ತಿಯಿಂದ ʼಅಂಬಾರಗೊಡ್ಲು-ಕಳಸವಳ್ಳಿʼ ಹೊಸ ಇತಿಹಾಸ ಬರೆದಿದೆ. ಅದರಂತೆ ಸೇತುವೆ ನಿರ್ಮಾಣ ಹೋರಾಟಕ್ಕೆ ಬಹು ದೊಡ್ಡ ಇತಿಹಾಸವೇ ಇದೆ. ಕಾಂಗ್ರೆಸ್‌ ಮುಖಂಡ ದಿ.ಭಾನುಪ್ರಕಾಶ ಅವರ ಶ್ರಮ ಅಪಾರವಾಗಿತ್ತು. ಅವರ ನಂತರ ಸ್ಥಳೀಯ ಯುವಕ ಪ್ರಸನ್ನ ಹೋರಾಟ ಸಮಿತಿ ಅಧ್ಯಕ್ಷರಾಗಿ ಇದನ್ನು ಸಾರ್ಥಕಗೊಳಿಸಿದರು ಎಂದು ಸ್ಮರಿಸಿದರು.

*ಶಾಂತ ಸ್ವಭಾವಿತ ರಾಘವೇಂದ್ರ:* ಸಂಸದ ರಾಘವೇಂದ್ರ ಅವರು ಯಡಿಯೂರಪ್ಪ ಅವರಿಗಿಂತ ಅತ್ಯಂತ ಶಾಂತ ಸ್ವಭಾವದ ವ್ಯಕ್ತಿ. ಅಭಿವೃದ್ಧಿ ಕಾರ್ಯಗಳಲ್ಲಿ ಎತ್ತಿದ ಕೈ. ಕೇಂದ್ರ ಸರ್ಕಾರದಲ್ಲಿ ಒಂದು ರೀತಿ ʼಬೆನ್ನು ಬಿಡದ ಬೇತಾಳʼ ಎಂಬಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ಎಲ್ಲರನ್ನು ಬೆನ್ನಟ್ಟಿ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕರು, ಗಣ್ಯರನೇಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು