ಇತ್ತೀಚಿನ ಸುದ್ದಿ
ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣ; ಬನ್ನಂಜೆ ರಾಜಾ ಸೇರಿ 4 ಮಂದಿಗೆ ಜೀವಾವಧಿ ಶಿಕ್ಷೆ
04/04/2022, 13:13
ಬೆಳಗಾವಿ(reporterkarnataka.com): ಹಫ್ತಾಕ್ಕೆ ಬೇಡಿಕೆಗೆ ಒಪ್ಪದ ಅಂಕೋಲಾದ ಉದ್ಯಮಿ ಆರ್.ಎನ್. ನಾಯಕ್ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಬೆಳಗಾವಿಯ ಕೋಕಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
ಕೋಕಾ ನ್ಯಾಯಾಲಯದಿಂದ ಇಂದು ತೀರ್ಪು ಪ್ರಕಟಿಸಲಾಯಿತು. 3 ಕೋಟಿ ಹಫ್ತಾದ ಬೇಡಿಕೆಯನ್ನು ಇಡಲಾಗಿತ್ತು. ಆದರೆ ನಾಯಕ್ ಅವರು ಇದನ್ನು ಒಪ್ಪಲಿಲ್ಲ. ಈ ಕಾರಣಕ್ಕೆ ನಾಯಕ್ ಹತ್ಯೆ ನಡೆಯಿತು ಎಂದು ಆರೋಪಿಸಲಾಗಿತ್ತು.
ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ 2013ರ ಡಿಸೆಂಬರ್ 21 ರಂದು ಉದ್ಯಮಿ ನಾಯಕ್ ಹತ್ಯೆ ನಡೆದಿತ್ತು. ಸುಪಾರಿ ನೀಡಿ ಕೊಲೆ ಮಾಡಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬನ್ನಂಜೆ ರಾಜಾ ಸೇರಿ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಪ್ರಕರಣದಲ್ಲಿ ಕ್ರಮವಾಗಿ 2,3 ಮತ್ತು 4ನೇ ಆರೋಪಿಗಳು ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ಬೆಂಗಳೂರಿನ ಅಭಿ ಬಂಡಗಾರ್, ಉಡುಪಿಯ ಗಣೇಶ್ ಭಜಂತ್ರಿ ಆಗಿದ್ದಾರೆ. 9ನೇ ಆರೋಪಿಯಾಗಿರುವ ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಆದೇಶ ಮಾಡಲಾಗಿದೆ.