ಇತ್ತೀಚಿನ ಸುದ್ದಿ
Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ ಕರೆ: ಕನಕ, ಪುರಂದರರ ಸ್ಮರಿಸಿದ ಮೋದಿ
28/11/2025, 15:12
ಉಡುಪಿ(reporterkarnataka.com): ನದಿ ಸಂರಕ್ಷಣೆ, ಅಮ್ಮನ ಹೆಸರಿನಲ್ಲಿ ಮರಗಳ ರಕ್ಷಣೆ, ಒಬ್ಬ ಬಡವನ ಉದ್ಧಾರ, ವೋಕಲ್ ಫಾರ್ ಲೋಕಲ್, ಸಾವಯವ ಕೃಷಿ, ಧಾನ್ಯಗಳ ಹೆಚ್ಚಿನ ಬಳಕೆ, ಊಟದಲ್ಲಿ ಎಣ್ಣೆಯ ಅಂಶ ಕಡಿಮೆ ಮಾಡುವುದು ಸೇರಿದಂತೆ ಒಟ್ಟು 9 (ನವ) ಸಂಕಲ್ಪಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
ಇಂದು ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಪಠನ ಯಜ್ಞದಲ್ಲಿ ಭಾಗವಹಿಸಿದ ಬಳಿಕ ಅವರು ಜನರನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಅವರು ಜನಸಂಘ ಹಾಗೂ ಉಡುಪಿಯ ಹಿಂದಿನ ಶಾಸಕ ಡಾ. ವಿ.ಎಸ್. ಆಚಾರ್ಯರನ್ನು ನೆನೆದರು. ಉಡುಪಿಯಲ್ಲಿ 5 ದಶಕದ ಹಿಂದೆಯೇ ಜನಸಂಘಕ್ಕೆ ಅಧಿಕಾರ ಸಿಕ್ಕಿತ್ತು. ಉಡುಪಿ ಬಿಜೆಪಿ ಮತ್ತು ಜನಸಂಘದ ಕರ್ಮಭೂಮಿ ಎಂದು ಪ್ರಧಾನಿ ಮೋದಿ ತಿಳಿಸಿದರು.
ಬಿಜೆಪಿಗೆ ಇಲ್ಲಿನ ಮುಖಂಡ ವಿ.ಎಸ್. ಆಚಾರ್ಯ ಅವರ ಕೊಡುಗೆ ಬಹಳಷ್ಟಿದೆ ಎಂದು ನೆನೆದರು. ಇಂದು ನನಗೆ ಉಡುಪಿ ಶ್ರೀಕೃಷ್ಣ ಮತ್ತು ಮಧ್ವಾಚಾರ್ಯರ ಆಶೀರ್ವಾದ ಸಿಕ್ಕಿದೆ. ಉಡುಪಿ ಮಠದಲ್ಲಿ ಲಕ್ಷ ಕಂಠ ಗೀತಾ ಪಠಣ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದು ನನ್ನ ಪರಮ ಸೌಭಾಗ್ಯ. ಉಡುಪಿಗೆ ಬರುವುದೆಂದರೆ ನನಗೆ ಬಹಳ ಸಂತಸದ ವಿಚಾರ ಎಂದರು.
ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ʼಜೈ ಶ್ರೀಕೃಷ್ಣʼ ಎಂದು ಮೂರು ಬಾರಿ ಘೋಷಣೆ ಮೊಳಗಿಸಿ ʼಎಲ್ಲರಿಗೂ ನಮಸ್ಕಾರʼ ಎಂದು ಕನ್ನಡದಲ್ಲಿ ಹೇಳಿ ಬಳಿಕ ಹಿಂದಿಯಲ್ಲಿ ಮಾತು ಮುಂದುವರಿಸಿದರು. ಭಾಷಣಕ್ಕೂ ಮುನ್ನ, ಸಭೆಯಲ್ಲಿ ಮೋದಿಯವರ ಭಾವಚಿತ್ರ ರಚಿಸಿ ಅದನ್ನು ಹಿಡಿದು ಕೂತಿದ್ದ ಮಕ್ಕಳಿಂದ ಅದನ್ನು ಸಂಗ್ರಹಿಸಿ ತನಗೆ ಕಳಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ತಾನು ಆ ಮಕ್ಕಳ ಪರಿಶ್ರಮವನ್ನು ಗುರುತಿಸಿದ್ದು, ಅವರಿಗೆ ಪ್ರತ್ಯುತ್ತರ ನೀಡುವುದಾಗಿ ತಿಳಿಸಿದರು.
ನನ್ನ ಜನ್ಮ ಗುಜರಾತ್‌ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ ನೀಡಿದೆ. ಉಡುಪಿ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದೆ. ಉಡುಪಿಯಲ್ಲಿ ಧರ್ಮ ಮತ್ತು ಸೇವೆ ಸಂಗಮವಿದೆ. ಲಕ್ಷಾಂತರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ ನಡೆಯುತ್ತಿದೆ. ದಾಸರ ಪದಗಳು ಕನ್ನಡಿಗರ ಮನೆ ಮನದಲ್ಲಿದೆ ಎಂದು ಹೇಳುವ ಮೂಲಕ ಪುರಂದರ ದಾಸ ಮತ್ತು ಕನಕದಾಸರನ್ನು ಸ್ಮರಿಸಿದರು.












